Kannada NewsKarnataka NewsLatestPolitics

ವಿಶ್ವ ಮಧುಮೇಹ ದಿನಾಚರಣೆ : ಜಾಗೃತಿ ಜಾಥಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ, ಮಧುಮೇಹ ಕೇಂದ್ರ, ಬಿ ಎಂ ಕಂಕಣವಾಡಿ, ಕೆಎಲ್‌ಇ – ಯುಎಸ್‌ಎಂ ಇವುಗಳ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಿದ್ದ ಮಧುಮೇಹ ಜಾಗೃತಿ ನಡಿಗೆಯನ್ನು ರಾಜ್ಯಸಭಾ ಸದಸ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹಸಿರು ನಿಶಾನೆ ತೋರಿಸುವದರ ಮೂಲಕ ಉದ್ಘಾಟಿಸಿದರು.
ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ಜಾಗೃತಿ ನಡಿಗೆಯು ಡಾ. ಬಿ. ಆರ್. ಅಂಬೇಡ್ಕರ ರಸ್ತೆ, ಕೃಷ್ಣದೇವರಾಯ ವೃತ್ತದ ಮೂಲಕ ಹೊರಟು ನೆಹರು ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯನ್ನು ತಲುಪಿತು. ಜಾಗೃತಿ ನಡಿಗೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ, ಕಾಹೆರ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಎ ಎಸ್ ಗೋಗಟೆ, ಡಾ. ಅರವಿಂದ ತೆನಗಿ ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ, ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ, ಸೇರಿದಂತೆ ಸಂಘಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ನಂತರ ಆಸ್ಪತ್ರೆಯಲ್ಲಿ ನಡೆದ ಮಧುಮೇಹದ ಕಾರ‍್ಯಕ್ರಮದಲ್ಲಿ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡಿ, ನಿಯಮಿತವಾಗಿ ಆಹಾರ ಸೇವನೆ, ವ್ಯಾಯಾಮ ಹಾಗೂ ಒತ್ತಡಮುಕ್ತ ಜೀವನ ನಡೆಸಿದರೆ ಮಧುಮೇಹವು ನಮ್ಮ ಹತ್ತಿರ ಸುಳಿಯುವುದಿಲ್ಲ. ಆದರೂ ಕೂಡ ನಮ್ಮಲ್ಲಿ ಅದು ಕಂಡುಬಂದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಹಜ ಜೀವನ ನಡೆಸಬಹುದೆಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ ಅವರು, ಪಾಲಕರಲ್ಲಿ ಮಧುಮೇಹದಂತ ಖಾಯಿಲೆಗಳಿದ್ದರೆ, ಅವು ಮಕ್ಕಳಿಗೂ ಬಳುವಳಿಯಾಗಿ ಬರುತ್ತವೆ ಎಂದರು.

ಆಧುನಿಕ ಜೀವನ ಶೈಲಿಗೆ ವಾಲುತ್ತಿರುವ ಯುವಕರು ಪಾಲಕರ ವಂಶವಾಹಿನಿಯ ಕುರಿತು ಜಾಗೃತೆವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳುವದು ಅತೀ ಮುಖ್ಯವಾದದ್ದು. ಭಾರತೀಯರಲ್ಲಿ ವಂಶಪಾರಂಪರ‍್ಯವಾಗಿ ರೋಗಗಳ ವಂಶವಾಹಿನಿ ಅಧಿಕ. ಪಾಲಕರು ಮಧುಮೇಹ ಹೊಂದಿದ್ದರೆ, ಮಕ್ಕಳು ೨೫ ವರ್ಷದ ನಂತರ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು, ಮುಂಜಾಗೃತಾ ಕ್ರಮ ಕೈಕೊಂಡರೆ ಅದರಿಂದ ಪಾರಾಗಬಹುದು ಎಂದು ತಿಳಿಸಿದರು.
ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಎ ಕೋಠಿವಾಲೆ ಅವರು ಮಾತನಾಡಿದರು. ಶಿಬಿರದಲ್ಲಿ ಉಚಿತ ರಕ್ತ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಸುಮಾರು ೧೫೦ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button