ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಪ್ರವಾಹದಲ್ಲಿ ಹಾನಿಯಾದ ವಿದ್ಯುತ್ ಮಗ್ಗಗಳಿಗೆ ಪ್ರತಿ ಮಗ್ಗಕ್ಕೆ ರೂ. 25 ಸಾವಿರ ಪರಿಹಾರ, ರಾಷ್ಟ್ರೀಕೃತ ಬ್ಯಾಂಕುಗಳ ಸಂಪೂರ್ಣ ಸಾಲ ಮನ್ನಾ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ. 18 ರಂದು ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ತಾಲೂಕಾ ನೇಕಾರ ವೇದಿಕೆ ಶನಿವಾರ ನಾರಾಯಣ ಪೇಟೆಯ ವಿಠ್ಠಲ ಹರಿ ಮಂದಿರದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನ. 18 ರಂದು ಸೋಮವಾರ ಮಧ್ಯಾಹ್ನ 11 ಗಂಟೆಗೆ ಕಂದಾಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ನೇಕಾರರು ನಿರ್ಧರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು 18-10-19 ರಂದು ಪ್ರತಿ ವಿದ್ಯುತ್ ಮಗ್ಗಗಳಿಗೆ ರೂ 25 ಸಾವಿರ ಪರಿಹಾರ ನೀಡಲು ಹೊರಡಿಸದ್ದ ಆದೇಶಕ್ಕೆ ವಿರುದ್ಧವಾಗಿ ಕಂದಾಯ ಇಲಾಖೆಯು ಮಗ್ಗದ ಮಾಲೀಕರಿಗೆ ರೂ. 25 ಸಾವಿರ ಎಂದು ತಿದ್ದಿ 24-10-19 ರಂದು ಪ್ರತಿ ಆದೇಶ ಹೊರಡಿಸಿದ್ದರ ವಿರುದ್ಧವಾಗಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೇವಾಂಗ ಜಗದ್ಗುರುಗಳಾದ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಗಾಯತ್ರಿ ಪೀಠ ಹಂಪಿ ಹಾಗೂ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಕುರುಹಿನಶೆಟ್ಟಿ ಸಮಾಜ, ವೀರಬಿಕ್ಷಾವತಿ ಮಠ ಹಳೇ ಹುಬ್ಬಳ್ಳಿ ಶ್ರೀಗಳವರ ನೇತ್ರತ್ವದಲ್ಲಿ ಬೆಳಗಾವಿ ಜಿಲ್ಲಾ ನೇಕಾರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಮದುರ್ಗ ತಾಲೂಕಿನ ಮನಿಹಾಳ ಸುರೇಬಾನ, ಹಲಗತ್ತಿ, ಸವದತ್ತಿ ತಾಲೂಕಿನ ಮುನವಳ್ಳಿ ಹಾಗೂ ಬೆಳಗಾವಿ ನಗರದ ವಿವಿಧ ಬಡಾವಣೆಗಳ ಸಾವಿರಾರು ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ನೇಕಾರ ವೇದಿಕೆ ಅಧ್ಯಕ್ಷ ವಿಠ್ಠಲ ಮುರುಡಿ, ತಾಲೂಕಾ ದೇವಾಂಗ ಸಮಾಜದ ಅಧ್ಯಕ್ಷರು ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಅಶೋಕ ಸೂಳಿಭಾವಿ, ಪುರಸಭೆ ಸದಸ್ಯರಾದ ಶಂಕರ ಬೆನ್ನೂರ, ಪ್ರಹ್ಲಾದ ಬಡಿಗೇರ, ನೇಕಾರ ಒಕ್ಕೂಟದ ರಾಜ್ಯ ನಿರ್ದೇಶಕ ಶ್ರೀನಿವಾಸ ಕುರುಡಗಿ, ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಸದಸ್ಯರಾದ ಶಿವಾನಂದ ಬಳ್ಳಾರಿ, ಪಿ.ಆರ್. ಸೂಳಿಭಾಂವಿ, ಮನೋಹರ ಹೊನ್ನುಂಗರ, ನಾರಾಯಣ ಬೆನ್ನೂರ, ನಾಗಪ್ಪ ಚಿಕ್ಕುಂಬಿ, ರಾಮಚಂದ್ರ ಯಾದವಾಡ, ತುಕಾರಾಮ ಬಲಕುಂದಿ ಇತರರು ಇದ್ದರು.
ಬೆಳಗಾವಿಯಲ್ಲಿನ ಪ್ರತಿಭಟನೆಗೆ ರಾಜ್ಯ ದೇವಾಂಗ ಸಂಘ ಬೆಂಗಳೂರು, ನೇಕಾರ ಸಮುದಾಯಗಳ ಒಕ್ಕೂಟ ಬೆಂಗಳೂರು, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಮಹಾಲಿಂಗಪುರ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ