ಪ್ರಗತಿವಾಹಿನಿ ಸುದ್ದಿ, ಗೋಕಾಕ -ಡಿ.5ರಂದು ನಡೆಯಲಿರುವ ಗೋಕಾಕ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಅವರ ಹೆಸರಿನಲ್ಲಿ ಜೆಡಿಎಸ್ ಬಿ ಫಾರ್ಮನ್ನು ಬೆಂಗಳೂರಿನಿಂದ ತರಲಾಗುತ್ತಿದೆ.
ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಸೋಮವಾರ ಅಶೋಕ ಪೂಜಾರಿ ನಾಮಪತ್ರ ಸಲ್ಲಿಸಲಿದ್ದು, ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಹಲವು ಗಣ್ಯರು ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಲಿದ್ದಾರೆ.
ಗುಟ್ಟು ಬಿಡದ ಪೂಜಾರಿ
ಇಷ್ಟೆಲ್ಲ ಬೆಳವಣಿಗೆ ನಡೆದರೂ ಅಶೋಕ ಪೂಜಾರಿ ಮಾತ್ರ ಇನ್ನೂ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಸ್ಪರ್ಧೆ ಖಚಿತವಾಗಿದೆ. ಆದರೆ ಬಿಜೆಪಿಯ ಅಶೋಕ ಪೂಜಾರಿ ಇನ್ನೂ ತಮ್ಮ ನಿರ್ಧಾರ ಬಹಿರಂಗ ಮಾಡಿಲ್ಲ. ಭಾನುವಾರ ಸಂಜೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಪೂಜಾರಿ, ಸೋಮವಾರಕ್ಕೆ ಮುಂದೂಡಿದ್ದಾರೆ. ಸೋಮವಾರ ನಿರ್ಧಾರ ತಿಳಿಸುವುದಾಗಿ ಹೇಳಿ ಮೊಬೈಲ್ ಸ್ವಚ್ಡ್ ಆಫ್ ಮಾಡಿದ್ದಾರೆ.
ಬಸ್ ನಲ್ಲಿ ಬರುತ್ತಿದೆ ಬಿ ಫಾರ್ಮ್
ಆದರೆ ಅಶೋಕ ಪೂಜಾರಿ ಜೆಡಿಎಸ್ ನಿಂದ ಸ್ಪರ್ಧಿಸಲು ಒಪ್ಪಿರುವುದನ್ನು ಜೆಡಿಎಸ್ ಖಚಿತಪಡಿಸಿದೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಭಾನುವಾರ ಸಂಜೆ ದಿಢೀರ್ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ ಅಶೋಕ ಪೂಜಾರಿ ಹೆಸರಿನ ಬಿ ಫಾರ್ಮ್ ಪಡೆದುಕೊಂಡು ರಾತ್ರಿ 10 ಗಂಟೆಗೆ ವಾಪಸ್ ಬೆಳಗಾವಿ ಬಸ್ ಹತ್ತಿದ್ದಾರೆ. ಸ್ವತಃ ಶಂಕರ ಮಾಡಲಗಿ ಪ್ರಗತಿವಾಹಿನಿಗೆ ಈ ವಿಷಯ ಖಚಿತಪಡಿಸಿದ್ದಾರೆ.
ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪುಟ್ಟರಾಜು, ಸಾ.ರಾ.ಮಹೇಶ್ ಮೊದಲಾದವರು ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಆಗಮಿಸುವ ಅವರು, ಗೋಕಾಕ, ಅಥಣಿ ಹಾಗೂ ಕಾಗವಾಡ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲಿದ್ದಾರೆ.
ಮನವೊಲಿಸಲು ಪ್ರಯತ್ನ
ಈ ಮಧ್ಯೆ ಅಶೋಕ ಪೂಜಾರಿ ಮನವೊಲಿಸಲು ಬಿಜೆಪಿ ಭಾನುವಾರವೂ ಪ್ರಯತ್ನ ಮುಂದುವರಿಸಿತ್ತು. ಎ.ಎಸ್.ಪಾಟೀಲ ನಡಳ್ಳಿ ಭಾನುವಾರ ಆಗಮಿಸಿ ಮಾತುಕತೆ ನಡೆಸಿದರು. ಶನಿವಾರ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಸ್ವತಃ ರಮೇಶ ಜಾರಕಿಹೊಳಿ ಕೂಡ ಪೂಜಾರಿ ಮನೆಗೆ ಹೋಗಿದ್ದರು.
ಆದರೆ ಅಶೋಕ ಪೂಜಾರಿ ತಮ್ಮ ನಿರ್ಧಾರವನ್ನೂ ಯಾರಿಗೂ ಸ್ಪಷ್ಟವಾಗಿ ತಿಳಿಸದೆ, ಮುಂದೂಡುತ್ತಲೇ ಬರುತ್ತಿದ್ದಾರೆ.
ಸೋಮವಾರ ಮೂವರು ನಾಯಕರೂ ಗೋಕಾಕದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಆಖಾಡ ರಂಗೇರಲಿದೆ. ಎಲ್ಲರೂ ಲಕ್ಷ ಲಕ್ಷ ಜನರನ್ನು ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ಗೋಕಾಕದಲ್ಲಿ ಸೋಮವಾರ ಆತಂಕದ ವಾತಾವರಣ ನಿರ್ಮಾಣವಾಗಲಿದೆ.
ಗೋಕಾಕ ರಾಜಕೀಯ ಇನ್ನಷ್ಟು ಕುತೂಹಲ: ತ್ರಿಕೋನ ಸ್ಪರ್ಧೆ ಫಿಕ್ಸ್?
ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ