ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಗವಂತ ನಮ್ಮಿಂದ ಏನನ್ನೂ ಬಯಸಲಾರ. ಇದನ್ನು ಮೊದಲು ತಿಳಿದುಕೊಳ್ಳಬೇಕು. ಭಕ್ತಿಯು ಮುಕ್ತಿಗೆ ಸಾಧನ. ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಜ್ಜನರ ನಡುವೆ ಬಾಳಬೇಕು. ಧರ್ಮದಿಂದ ನಡೆಯಬೇಕು. ಕ್ಷಣ ಕ್ಷಣಕ್ಕೂ ಭಗವಂತನನ್ನು ನೆನೆಯುತ್ತಿರಬೇಕು ಎಂದು ಉತ್ತರಾಧಿ ಮಠದ ಪೂಜ್ಯ ಸತ್ಯಾತ್ಮತೀರ್ಥರು ಹೇಳಿದರು.
ರೇಲ್ವೆ ನಿಲ್ದಾಣದ ಹತ್ತಿರವಿರುವ ಬಿ. ಕೆ. ಮಾಡೆಲ್ ಹೈಸ್ಕೂಲ್ ಹೊರ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ನಗರದ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಸಮಾರೋಪ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.
ಸಂಸ್ಕೃತ ಸಂಸ್ಕೃತಿ ಎಂಬ ಗೊಷ್ಠಿಯಲ್ಲಿ ಮಾತನಾಡತ್ತ ಪಂ. ಅರುಣಾಚಾರ್ಯ ಕಾಖಂಡಕಿ, ಭಾರತ ದೇಶದ ಕಣ ಕಣದಲ್ಲಿಯೂ ಸಂಸ್ಕೃತ ಭಾಷೆ ತುಂಬಿತ್ತು. ಸಂಸ್ಕೃತ ಭಾಷೆಯನ್ನು ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ಮಾತನಾಡುತ್ತಿದ್ದವು ಎಂಬುದರ ಕುರಿತು ಉಲ್ಲೇಖಗಳಿವೆ. ವಿಶ್ವದ ತುಂಬ ೬೯೯೦ ಭಾಷೆಗಳಿದ್ದವು. ಎಲ್ಲ ಭಾಷೆಗಳಲ್ಲಿ ಉತ್ಕೃಷ್ಟ ಸಭ್ಯ ಭಾಷೆ ಹಾಗೂ ಪರಿಣಾಮಕಾರಿ ಭಾಷೆ ಎಂದರೆ ಸಂಸ್ಕೃತ. ಹಿರಿಯರ ಭಾಷೆಯೇ ಕಿರಿಯರದ್ದು ಆಗಬೇಕಲ್ಲವೆ. ಸಂಸ್ಕೃತ ದೇವಭಾಷೆಯಾದ್ದರಿಂದ ಇದು ನಮ್ಮ ನಿಮ್ಮೆಲ್ಲರ ಭಾಷೆಯಾಗಬೇಕೆಂದು ಹೇಳಿದರು.
ಪಂ. ಪ್ರಧ್ಯುಮ್ನಾಚಾರ್ಯ ಜೋಶಿ ಮಾತನಾಡಿ, ಒಳ್ಳೆಯ ಮಾತುಗಾರನ ಮೂಲವೆಂದರೆ ಸಂಸ್ಕೃತ. ಉತ್ಕೃಷ್ಟ ಭಾಷೆಯಾದ ಸಂಸ್ಕೃತವನ್ನು ಸಂಸ್ಕೃತ ಭಾಷೆಯನ್ನು ನೀವು ಕಲಿಯುವುದರ ಮೂಲಕ ಮಕ್ಕಳಿಗೆ ಕಲಿಸುವುದರ ಮೂಲಕ ಸಂಸ್ಕೃತ ಭಾಷೆಯ ಲಾಭವನ್ನು ಪಡೆಯುವ ಸಂಕಲ್ಪವನ್ನು ಮಾಡಬೆಕೆಂದು ಕೇಳಿಕೊಂಡರು.
ಸತ್ಯಧ್ಯಾನಾಚಾರ್ಯ ಕಟ್ಟಿಯವರು ’ಗುರುವಿನ ಗುಲಾಮ’ ಎಂಬ ವಿಷಯದ ಮೇಲೆ ಮಾತನಾಡುತ್ತ ಗುಲಾಮ ಎಂದರೆ ಅಸ್ವಾತಂತ್ರ್ಯ ಎಂಬ ಭಾವನೆ ಬರುತ್ತದೆ. ಆದರೆ ಅದು ಹಾಗಲ್ಲ. ನಮ್ಮನ್ನು ನಾವು ಸಂಪೂರ್ಣವಾಗಿ ಗುರುವಿಗೆ ಸಮರ್ಪಿಸಿಕೊಳ್ಳುವುದೆಂದು ಅರ್ಥ. ಹಾಗಾದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಹಮ್ಮಿಣಿ: ಪಾದುಕಾರಾಧನಾ ಸಮಿತಿಯವರು ಭಕ್ತರಿಂದ ಸಂಗ್ರಹಿಸಿದ ನಲ್ವತ್ತು ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಸ್ವಾಮಿಗಳ ಮುಖಾಂತರ ಉತ್ತರಾಧಿಮಠಕ್ಕೆ ಅರ್ಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ