*ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೇಸ್ : ಬಂಧಿತ 8 ಜನರ ವಿವರ ಬಹಿರಂಗ*

ಪ್ರಗತಿವಾಹಿನಿ ಸುದ್ದಿ: ರೌಡಿ ಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಇಂಚಿಂಚೂ ಆರೋಪಿಗಳ ಮಾಹಿತಿಯನ್ನು ಕಲೆಹಾಕಿರುವ ಪೊಲೀಸರು ಇದೀಗ ಬಹಿರಂಗ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಹತ್ಯೆ ಕೇಸ್ನಲ್ಲಿ ಪ್ರಮುಖ ಆರೋಪಿ ಸಫಾನ್ ನನ್ನೂ ಬಂಧಿಸಲಾಗಿದೆ ಎಂದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿರುವಂತೆ ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ. ಅವರ ವಿವರವನ್ನು ನೀಡಿದ್ದಾರೆ. ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಬಂಧಿತರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ.