Kannada NewsKarnataka NewsLatest

ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಮೇಶ ಜಾರಕಿಹೊಳಿ ಗೆಲುವು -ಅಂಗಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ –ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಲಿದ್ದು, ರಮೇಶ ಜಾರಕಿಹೊಳಿ ಅವರ ಕೃಪೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.


ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದ ಆವರಣದಲ್ಲಿ ಗೋಕಾಕ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು, ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್-ಕಾಂಗ್ರೇಸ್ ಸರ್ಕಾರದ ಸರ್ವಾಧಿಕಾರತ್ವ ಧೋರಣೆಗೆ ಬೇಸತ್ತು, ಅದರಲ್ಲಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಮತ್ತು ಶಾಸಕರು ಪದತ್ಯಾಗ ಮಾಡಿ, ಕೋರ್ಟು-ಕಛೇರಿ ಅಲೆದು ಸಾಕಷ್ಟು ವನವಾಸ ಅನುಭವಿಸಿದ್ದಾರೆ. ಅವರು ಕೈಗೊಂಡ ದಿಟ್ಟ ನಿರ್ಧಾರದಿಂದಾಗಿಯೇ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳದೇ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ನಿಂತುಕೊಂಡು ದಾಖಲೆಯ ಜಯಕ್ಕೆ ಶ್ರಮಿಸಬೇಕೆಂದು ಕೋರಿದರು.

 ಕ್ಷೇತ್ರಕ್ಕೆ ಎರಡು ಲಾಭ :  ಬಾಲಚಂದ್ರ ಜಾರಕಿಹೊಳಿ


ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಇಬ್ಬರು ಸಹೋದರರ ಮಧ್ಯೆ ಮೂರನೇ ವ್ಯಕ್ತಿ ಲಾಭ ತೆಗೆದುಕೊಳ್ಳಬಹುದೆಂಬುದನ್ನು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗುವುದಿಲ್ಲ. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಗೆಲುವು ಶತಸಿದ್ಧ. ನನ್ನ ಭವಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ. ಈ ಗೆಲುವಿನಿಂದ ಗೋಕಾಕ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.

ಇದರ ಜೊತೆಗೆ ಕಾಗವಾಡ, ಅಥಣಿ ಕ್ಷೇತ್ರಗಳೂ ಸೇರಿದಂತೆ ರಾಜ್ಯದ ೧೫ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆಂದು ಹೇಳಿದರು.
ನಮ್ಮ ಎನ್‌ಎಸ್‌ಎಫ್ ಕಛೇರಿಯಿಂದ ಪ್ರಚಾರ ಪ್ರಾರಂಭಿಸಿರುವ ರಮೇಶ ಜಾರಕಿಹೊಳಿ ಅವರ ಗೆಲುವನ್ನು ಯಾರೂ ತಡೆಯಲಾರರು.

ಈ ನೆಲದ ಶಕ್ತಿ ಅಪಾರವಾಗಿದೆ. ಇದಕ್ಕೆ ನಾನೇ ಐದು ಬಾರಿ ಗೆಲುವು ಸಾಧಿಸಿರುವುದು ಈ ನೆಲದಿಂದಲೇ. ಜೊತೆಗೆ ಈ ಚುನಾವಣೆಯಲ್ಲಿ ಒಂದು ಮತದಿಂದ ಎರಡು ಅಧಿಕಾರಗಳು ಸಿಗುತ್ತವೆ. ಒಂದು ಶಾಸಕರಾದರೆ ಇನ್ನೊಂದು ಸಚಿವರಾಗುತ್ತಾರೆ. ಆದ್ದರಿಂದ ರಮೇಶ ಜಾರಕಿಹೊಳಿ ಅವರನ್ನು ಆರಿಸಿ ಕಳುಹಿಸಿದರೆ ಸರ್ಕಾರದಲ್ಲಿ ಮಹತ್ವದ ಖಾತೆ ದೊರಕಲಿದೆ. ಇದರಿಂದ ನಮ್ಮ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ಹೇಳಿದರು.

ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮತಯಾಚಿಸಿದರು.
ಹಿರಿಯ ಶಾಸಕರಾದ ಉಮೇಶ ಕತ್ತಿ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಎ.ಎಸ್.ಪಾಟೀಲ(ನಡಹಳ್ಳಿ), ಅನೀಲ ಬೆನಕೆ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಎಂ.ವ್ಹಿ. ನಾಗರಾಜ್, ಯುವ ಮುಖಂಡ ಅರುಣ ಕಾರಜೋಳ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಗ್ರಾಮೀಣ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ಮುಖಂಡ ಎಸ್.ಎ. ಕೋತವಾಲ, ಪಕ್ಷದ ಹಲವು ಮುಖಂಡರುಗಳು, ಬಿಜೆಪಿ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎನ್‌ಎಸ್‌ಎಫ್ ಅತಿಥಿ ಗೃಹದಿಂದ ಬೃಹತ್ ಪ್ರಮಾಣದಲ್ಲಿ ಮೆರವಣಿಗೆ ನಡೆಯಿತು. ಸಹಸ್ರಾರು ಬಿಜೆಪಿ ಕಾರ್ಯಕರ್ತರ ಘೋಷ್ ವಾಕ್ಯಗಳೊಂದಿಗೆ ತೆರೆದ ವಾಹನದಲ್ಲಿ ಅಭ್ಯರ್ಥಿ ರಮೇಶ ಜಾರಕಿಹೊಳಿ, ಹಲವು ನಾಯಕರು, ಕಾರ್ಯಕರ್ತರತ್ತ ಕೈ ಮುಗಿಯುತ್ತ ಮತಯಾಚಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದ ಮೂಲಕ ಮಿನಿ ವಿಧಾನಸೌಧ ಕಾರ್ಯಾಲಯಕ್ಕೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಅಶೋಕ ಪೂಜಾರಿ ನಾಮಪತ್ರ ಸಲ್ಲಿಕೆ: ಈಗ ಬೆಳಗಾವಿಗೆ ಬಂದಿಳಿದ ಕುಮಾರಸ್ವಾಮಿ

ಲಖನ್ ಭರ್ಜರಿ ಶಕ್ತಿ ಪ್ರದರ್ಶನ: ಸತೀಶ್ ಡಮ್ಮಿ ನಾಮಪತ್ರ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button