ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ನೀಡಿದ ಗಣೇಶ ಹುಕ್ಕೇರಿ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಸಾಲ ತೀರಿಸಲಾಗದೆ ಆತ್ಮ ಹತ್ಯೆ ಮಾಡಿಕೊಂಡಿದ್ದ ರೈತನ ಪತ್ನಿಗೆ ಶಾಸಕ ಗಣೇಶ ಹುಕ್ಕೇರಿ ಸೋಮವಾರ 5 ಲಕ್ಷ ರೂ. ಚೆಕ್ ವಿತರಿಸಿದರು.
ಇಂಗಳಿಯ ಮಹಾದೇವ ಶಿವಪ್ಪ ಅಂಬಿ (48) ಕಳೆದ ಜುಲೈ 4ರಂದು ಇಂಗಳಿ ಗ್ರಾಮದ ಮಳಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ವಯಕ್ತಿಕವಾಗಿ 5.49 ಲಕ್ಷ ರೂ. ಹಾಗೂ ಸಹೋದರ ಶಂಕರ ಶಿವಪ್ಪ ಅಂಬಿ ಜಂಟಿ ಖಾತೆಯಲ್ಲಿ 17 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಮಹಾದೇವ ಸಾಲ ತೀರಿಸಲಾಗದೆ ಅನೇಕ ದಿನಗಳಿಂದ ಚಿಂತಾಕ್ರಾಂತನಾಗಿದ್ದ.
ಮಹಾದೇವ ಹೆಸರಲ್ಲಿ ಉಗಾರ ಬುದ್ರುಕದಲ್ಲಿ 2 ಎಕರೆ ಮತ್ತು ಇಂಗಳಿಯಲ್ಲಿ ಜಂಟಿ ಖಾತೆಯಲ್ಲಿ 19 ಗುಂಟೆ ಮಾತ್ರ ಜಮೀನು ಇತ್ತು.
ಪ್ರಕರಣವನ್ನು ಪರಿಶೀಲಿಸಿದ ಅಧಿಕಾರಿಗಳು ಆತನ ಆತ್ಮಹತ್ಯೆಗೆ ಸಾಲವಲ್ಲದೆ ಬೇರೆ ಯಾವುದೇ ಕರಣ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದು 5 ಲಕ್ಷ ರೂ. ಮಂಜೂರು ಮಾಡಿದ್ದರು.
ಮೃತನ ಮನೆಗೆ ಸೋಮವಾರ ಸಂಜೆ ತೆರಳಿದ ಗಣೇಶ ಹುಕ್ಕೇರಿ, ರೈತನ ಪತ್ನಿ ಲತಾ ಮಹಾದೇವ ಅಂಬಿಗೆ 5 ಲಕ್ಷ ರೂ. ಚೆಕ್ ವಿತರಿಸಿದರು.
ರೈತರು ಯಾವುದೇ ಸಂದರ್ಭದಲ್ಲಿ ಎದೆಗುಂದಬಾರದು. ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯಬಾರದು. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ರೈತರ ಕಷ್ಟಗಳಿಗೆ ಸದಾಕಾಲ ಸ್ಪಂದಿಸಲು ಸಿದ್ಧ ಎಂದು ಗಣೇಶ ಹುಕ್ಕೇರಿ ಧೈರ್ಯ ತುಂಬಿದರು.
ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ