ಪ್ರಗತಿವಾಹಿನಿ ಸುದ್ದಿ
ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಗುವಾಹಟಿ ಸಮೀಪ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಈ ಸೇತುವೆಯ ಉದ್ದ 4.9 ಕಿ.ಮೀ., ರೈಲು ಹಾಗೂ ರಸ್ತೆ ಸಂಪರ್ಕವನ್ನು ಈ ಸೇತುವೆ ಕಲ್ಪಿಸುತ್ತದೆ. ದೇಶದ ಅತ್ಯಂತ ಉದ್ದನೆಯ ರೈಲ್‌ರೋಡ್ ಸೇತುವೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯಾಹ್ನ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೋಗಿಬಿಲ್ ಸೇತುವೆಯನ್ನು ಉದ್ಘಾಟಿಸಿದರು.
ಅಸ್ಸಾಂ-ಅರುಣಾಚಲ ಪ್ರದೇಶದ ನಡುವೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಬೋಗಿಬಿಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡಾ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಷ್ಟು ಸುಭದ್ರವಾಗಿದೆ. ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಇದಾಗಿದೆ. 1997ರಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಈ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. 1997ರಲ್ಲಿ ಶಂಕುಸ್ಥಾಪನೆಗೊಂಡರೂ, ಸೇತುವೆಯ ಕಾಮಗಾರಿ ಆರಂಭಗೊಂಡಿದ್ದು 2002ರಲ್ಲಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸೇತುವೆಯ ಕಾಮಗಾರಿ ಆರಂಭವಾಯಿತು. ಸುಮಾರು 5960 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕಾಮಗಾರಿ ಪೂರ್ಣಗೊಳ್ಳುವಾಗ ಶೇ 85ರಷ್ಟು ವೆಚ್ಚ ಏರಿಕೆಯಾಗಿದೆ.
ಬ್ರಹ್ಮಪುತ್ರಾ ನದಿಗೆ ಕಟ್ಟಿರುವ 4ನೇ ಸೇತುವೆ ಇದಾಗಿದೆ. ಅರುಣಾಚಲ ಪ್ರದೇಶದ ಭಾಗದಲ್ಲಿರುವ ಚೀನಾ ಗಡಿ ಭಾಗಕ್ಕೆ ಮಿಲಿಟರಿ ಅಗತ್ಯವನ್ನು ಪೂರೈಸಲೂ ಈ ಸೇತುವೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ