Kannada NewsKarnataka NewsLatest

ನೂತನ ತಾಲೂಕ ಪಂಚಾಯತಿ ಪ್ರಥಮ ತ್ರೈಮಾಸಿಕ ಸಭೆ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಅತೀಯಾದ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಾಲೂಕಾಡಳಿತದ ಅಧಿಕಾರಿಗಳು ಕೂಡಲೇ ಸ್ಪಂದಿಸಿದ್ದು ಶ್ಲಾಘನೀಯ, ಆದರೆ ಹಾನಿಗೊಳಗಾದ ಸಂತ್ರಸ್ಥರು ಯಾರೊಬ್ಬರೂ ಈ ಯೋಜನೆಯಿಂದ ಹೊರಗುಳಿಯಬಾರದು. ಅದರಂತೆ ತಪ್ಪು ಮಾಹಿತಿ ಮೂಲಕ ಫಲಾನುಭವಿಯಾಗಲು ನೀಡಿರುವ ಅರ್ಜಿಯನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಬೇಕು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ನೂತನವಾಗಿ ಬೀಡಿ ಕ್ರಾಸ್‌ನಲ್ಲಿ ಪ್ರಾರಂಭವಾಗಿರುವ ತಾಲೂಕ ಪಂಚಾಯತಿ ಕಚೇರಿಯಲ್ಲಿ ನಡೆದ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಯ ಆವಾಂತರದಿಂದ ತಾಲೂಕಿನ ಜನರು ತತ್ತರಿಸಿದ್ದಾರೆ. ಅಷ್ಠೆ ಅಲ್ಲದೆ ಸೂರು ಕಳೆದುಕೊಂಡು ಪರದಾಡುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇವೆ. ಹೀಗಾಗಿ ಅಧಿಕಾರಿಗಳು ಅಂತಹ ಫಲಾನುಭವಿಗಳಿಗೆ ಉಂಟಾದ ಹಾನಿಯ ಪ್ರಮಾಣದ ಮೇಲೆ ಸೂಕ್ತವಾದ ನಿರ್ಧಾರ ಕೈಗೊಂಡು ಅವರಿಗೆ ಸಹಾಯಧನ ಕಲ್ಪಿಸಿಕೊಡಬೇಕು. ಅಲ್ಲದೆ ಯಾರೊಬ್ಬರೂ ವಾಸ ಮಾಡದ ಮನೆಗಳು ಸಹ ಈ ಸಂದರ್ಭದಲ್ಲಿ ಹಾನಿಗೊಳಗಾಗಿದ್ದರೆ ಅಂತಹ ಅರ್ಜಿಯನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಬೇಕೆಂದು ತಿಳಿಸಿದರು.

ತಾಲೂಕಿನಲ್ಲಿ ಈಗಾಗಲೇ ೫ ಆಧಾರ ಕಾರ್ಡ್ ಕೇಂದ್ರಗಳನ್ನು ತೆರೆದರೂ ಸಹ ಗ್ರಾಮಸ್ಥರಿಗೆ ಅಲೆದಾಟ ತಪ್ಪುತ್ತಿಲ್ಲ, ಹೀಗಾಗಿ ಪ್ರತಿ ಗ್ರಾಪಂ ಕಚೇರಿಯಲ್ಲಿ ಆಧಾರ ಕಾರ್ಡ್ ಕೇಂದ್ರ ತೆರೆಯಬೇಕೆಂದು ಎಲ್ಲ ಪಿಡಿಓಗಳಿಗೆ ಖಡಕ್ಕಾಗಿ ಸೂಚಿಸಿದ ಅವರು, ಆಯಾ ಗ್ರಾಪಂ ವ್ಯಾಪ್ತಿಯ ಜನರು ತಮ್ಮ ತಮ್ಮ ಆಧಾರ ಕಾರ್ಡ್ ಗಳನ್ನು ತಮ್ಮ ಗ್ರಾಪಂನಲ್ಲಿ ಮಾಡಿಸಿಕೊಳ್ಳುವಂತೆ ಕೋರಿದರು.

ತಾಲೂಕಿನ ಸಬ್ ರಿಜಿಸ್ಟರ್ ಕಚೇರಿ, ಲೋಕೋಪಯೋಗಿ ಇಲಾಖೆ, ಸಾರಿಗೆ ಸಂಸ್ಥೆ, ಕುಂದು ಕೊರತೆಗಳ ಬಗ್ಗೆ ಹಾಗೂ ಅಲ್ಲಿ ಜನರಿಗಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳುವಂತೆ ಸೂಚಿಸಿದ ಶಾಸಕ ದೊಡಗೌಡರ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಏಜೆಂಟರ್ ಹಾವಳಿ ಹೆಚ್ಚಾಗಿದೆ.

ಅಲ್ಲದೆ ಕಡಿಮೆ ಖರ್ಚಿನಲ್ಲಿ ಆಗುವ ಕೆಲಸಕ್ಕೆ ಏಜೆಂಟರ ಹಾವಳಿಯಿಂದ ದುಬಾರಿ ಬೆಲೆ ವಸೂಲಿ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ಸಾರ್ವಜನಿಕರ ಕೆಲಸವನ್ನು ಮಾಡಿಕೊಡಬೇಕೆಂದು ಸೂಚಿಸಿದರು.

ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಸರಿಯಲ್ಲ, ಅತೀವೃಷ್ಠಿಯಿಂದ ತಾಲೂಕಿನ ಹಲವೆಡೆ ರಸ್ತೆಗಳಲ್ಲಿ ತೆಗ್ಗು ಗುಂಡಿಗಳೆ ಹೆಚ್ಚಾಗಿ ಕಂಡು ಬರುತ್ತಿವೆ. ಈ ಕುರಿತು ಹಲವಾರು ಭಾರಿ ರಸ್ತೆ ಸುಧಾರಿಸುವಂತೆ ಸೂಚಿಸಿದರೂ ಯಾವೊಂದು ಕಾರ್ಯ ನಡೆದಿಲ್ಲ. ಕೂಡಲೇ ತೆಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮಿನಿ ವಿಧಾನಸೌಧ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಕೂಡಲೇ ಗುತ್ತಿಗೆದಾರರಿಗೆ ಸೂಚಿಸಿ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಆನಿಕಿವಿಗೆ ಸೂಚಿಸಿದರು.

ತಾಲೂಕಿನಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿಯನ್ನು ಪಡೆದರು. ಬಹಳಷ್ಟು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಗಿತವಾಗಿರುವದರ ಬಗ್ಗೆ ಆರೋಪಗಳು ಕೇಳಿಬರುತ್ತವೆ. ಅವುಗಳನ್ನು  ಬೇಗನೆ ಸರಿಪಡಿಸಿ ವರದಿಯನ್ನು ಕಳಿಸಬೇಕು. ಅಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಬಾರದು. ಸಾರ್ವಜನಿಕರಿಗೆ ಸಮರ್ಪಕವಾದ ಸೇವೆ ನೀಡುವುದು ನಮ್ಮ ಕರ್ತವ್ಯ. ಒಂದು ವೇಳೆ ಸುಳ್ಳು ಮಾಹಿತಿ ನೀಡಿರುವುದು ಗಮನಕ್ಕೆ ಬಂದಲ್ಲಿ ಅಧಿಕಾರಿಯೇ ನೇರಹೊಣೆಯಾಗುತ್ತಾರೆಂದು ಹೇಳಿದರು.

ಕೆರೆಗಳು ಒತ್ತುವರಿಯಾದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕೆಂದರು.

ತಹಸೀಲ್ದಾರ ಪ್ರವೀಣ ಜೈನ್ ಮಾತನಾಡಿ, ತಾಲೂಕಿನಲ್ಲಿರುವ ಸಾರ್ವಜನಿಕರ ಕೆಲಸಕ್ಕೆ ಯಾವುದೇ ವಿಳಂಬ ಮಾಡದೇ ಕಾರ್ಯ ನಿರ್ವಹಿಸಲು ಕ್ರಮ ಕೈಗೋಳ್ಳುತ್ತೇವೆ ಎಂದು ಹೇಳಿದರು, ತಾಲೂಕಿನ ಇಟಗಿ ಕ್ರಾಸ್ ನಲ್ಲಿ ತುರ್ತಾಗಿ ಅಟಲ್ ಜನಸ್ನೇಹಿ ಕೇಂದ್ರವನ್ನು ಪ್ರಾರಂಭಿಸುತ್ತೇವೆ. ಇದರಿಂದ ಈ ಭಾಗದ ಜನರಿಗೆ ಸಮಯ ಉಳಿತಾಯದ ಜೊತೆಗೆ ಕೆಲಸಗಳು ಬೇಗನೆ ಆಗುತ್ತವೆಂದು ಹೇಳಿದರು.

ಜಿ ಪಂ ಸದಸ್ಯೆ ಬಸವ್ವ ಕೋಲಕಾರ, ರಾಧಾಶ್ಯಾಂ ಕಾದ್ರೊಳ್ಳಿ ಹಾಗೂ ತಾಪಂ ಸದಸ್ಯರು ಹಾಜರಿದ್ದರು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ ಸ್ವಾಗತಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button