
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬೆಂಗಳೂರಿನಲ್ಲಿ ಇಂದು ಸಂಜೆಯಿಂದಲೇ ಮಳೆಯಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಹಲವು ಬಡಾವಣೆಗಳು ನದಿಯಂತಾಗಿದ್ದು, ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದೆ.
ನಿನ್ನೆ ಸುರಿದ ಮಳೆ ಅಬ್ಬರಕ್ಕೆ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಗಳು ಜಲಾವೃತಗೊಂಡಿತ್ತು. ಇದೀಗ ಇಂದು ಕೂಡ ಮಳೆ ಅಬ್ಬರ ಜೋರಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಹಲವು ರಸ್ತೆಗಳು, ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬೆಂಗಳೂರಿನಲ್ಲಿ ಮುಂದಿನ 12 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದ 8 ವಲಯಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದ್ದು, ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಕೋಲಾರ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.