ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ 1550 ಜನರಿಗೆ ಮನೆ ದುರಸ್ತಿ ಹಾಗೂ ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಿಸುವ ಬೃಹತ್ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಕ್ಷೇತ್ರದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಯಾರೊಬ್ಬರೂ ಪರಿಹಾರದಿಂದ ವಂಚಿತರಾಗಲು ಅವಕಾಶ ಕೊಡುವುದಿಲ್ಲ. ಪ್ರತಿಯೊಬ್ಬರಿಗೂ ನ್ಯಾಯ ಸಲ್ಲಿಸಬೇಕಾದ ಕೆಲಸವನ್ನು ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ಸಂತ್ರಸ್ತರ ಪಟ್ಟಿಯಲ್ಲಿ ಯಾರದ್ದೇ ಹೆಸರು ಬಿಟ್ಟುಹೋದರೂ ಸೇರ್ಪಡೆ ಮಾಡಲಾಗುವುದು. ಸಧ್ಯ 1550 ಜನರ ಹೆಸರು ಮನೆಕಳೆದುಕೊಂಡವರ ಪಟ್ಟಿಯಲ್ಲಿ ಸೇರಿದ್ದು ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ಮಂಜೂರಾಗಿದೆ. ಇನ್ನೂ ಹೊಸದಾಗಿ 700 ಜನರ ಹೆಸರನ್ನು ಸೇರಿಸಲಾಗುತ್ತಿದೆ. ಆದಾಗ್ಯೂ ಯಾರೂ ಹೊರಗುಳಿಯಬಾರದೆಂದು ಮತ್ತೊಮ್ಮೆ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
ಸಂತ್ರಸ್ತರ ಹೆಸರು ಸೇರ್ಪಡೆ ಮಾಡಲು ಯಾವುದೇ ಏಜಂಟರನ್ನು ನೇಮಿಸಿಲ್ಲ. ಆ ರೀತಿಯ ಮೋಸ ಮಾಡಲು ಯಾರೇ ಬಂದರೂ ಅವರಿಂದ ವಚನೆಗೊಳಗಾಗಬಾರದು. ಈ ಬಗ್ಗೆ ನಿಗಾವಹಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಏನೇ ಸಮಸ್ಯೆಯಾದರೂ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಧೈರ್ಯ ತುಂಬಿದರು.
ಅಪ್ಪಿ, ಮುದ್ದಾಡಿದ ಫಲಾನುಭವಿ ಮಹಿಳೆಯರು
ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಮಹಿಳೆಯರು ಸಕಾಲದಲ್ಲಿ ಪರಿಹಾರ ಕೊಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಕಾರ್ಯವನ್ನು ಪ್ರಶಂಸಿಸಿದ್ದಲ್ಲದೆ, ಅವರನ್ನು ಅಪ್ಪಿ ಮುದ್ದಾಡಿ ಸಂತಸದಿಂದ ಕಣ್ಣೀರು ಸುರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ