ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಜಿಲ್ಲೆಯ ಮೂರು ಕ್ಷೇತ್ರಗಳ ಉಪ ಚುನಾವಣೆಯ ಸಂದರ್ಭದಲ್ಲಿ ಗಡಿಭಾಗದಲ್ಲಿ ಅಕ್ರಮ ಹಣ ವರ್ಗಾವಣೆ, ಮದ್ಯ ಸಾಗಾಣಿಕೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆರೆ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಮನವಿ ಮಾಡಿಕೊಂಡರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಎರಡೂ ಗಡಿ ಜಿಲ್ಲೆಯ ಅಧಿಕಾರಿಗಳ ಜತೆ ಶುಕ್ರವಾರ(ನ.೨೨) ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ತೀವ್ರ ನಿಗಾವಹಿಸಬೇಕು ಹಾಗೂ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಿದರು.
ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಮತದಾನ ದಿನಕ್ಕಿಂತ ೪೮ ಗಂಟೆಗಳ ಮೊದಲು ಗಡಿಭಾಗದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಕೋರಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್ ಗಳ ಕುರಿತು ಮಾಹಿತಿಯನ್ನು ಒದಗಿಸಲಾಯಿತು.
ಕಾಗವಾಡ ಮತಕ್ಷೇತ್ರದ ಅಭ್ಯರ್ಥಿ ಅಭ್ಯರ್ಥಿಯಾಗಿರುವ ಶ್ರೀಮಂತ ಪಾಟೀಲ ಅವರು ಸಾಂಗಲಿಯ ನಿವಾಸಿಯಾಗಿರುವುದರಿಂದ ಉಭಯ ಜಿಲ್ಲೆಗಳ ಮಧ್ಯೆ ಸಂಚರಿಸುವಾಗ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಲ್ಲಾಪುರ ಹಾಗೂ ಸಾಂಗಲಿಯ ಜಿಲ್ಲೆಯ ಹಿರಿಯ ಅಧಿಕಾರಿಗಳು, ಮುಕ್ತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ