
ಪ್ರಗತಿವಾಹಿನಿ ಸುದ್ದಿ, ಮುಂಬೈ – ರಾತ್ರಿ ಮುಂಬೈ ಮಹಾನಗರಿ ತಣ್ಣಗೆ ಮಲಗಿತ್ತು. ಒಂದು ತಿಂಗಳ ರಾಜಕೀಯ ಬೆಳವಣಿಗೆಗಳೆಲ್ಲ ಮುಗಿದು ಶನಿವಾರ ಶಿವಸೇನೆ- ಎನ್ ಸಿಪಿ -ಕಾಂಗ್ರೆಸ್ ಸರಕಾರ ರಚನೆಯಾಗಬಹುದು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದುಕೊಂಡು ಜನ ಎಲ್ಲ ಶುಕ್ರವಾರ ರಾತ್ರಿ ನಿದ್ದೆಗೆ ಜಾರಿದ್ದರು. ಶನಿವಾರ ನಸುಕಿನಲ್ಲಿ ಮುದ್ರಣ ಮಾಧ್ಯಮಗಳಲ್ಲೂ ಅದೇ ಹೈಲೈಟ್ ಆಗಿದ್ದವು.
ಇದನ್ನೂ ಓದಿ – ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ
ಆದರೆ ಜನ ಸರಿಯಾಗಿ ಕಣ್ಣು ತರೆಯುವ ವೇಳೆಗೆ ಆಗಿದ್ದೇ ಬೇರೆ. ಜನ ನಂಬಲು ಸಿದ್ಧವಿರಲಿಲ್ಲ. ಒಂದು ರಾತ್ರಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳು ನಡೆಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ನಂಬಲೇ ಬೇಕಿತ್ತು.
ಅಕ್ಟೋಬರ್ 24ರಂದೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರ ರಚನೆಯಾಗಬೇಕಿತ್ತು. ಆದರೆ ಚುನಾವಣೆ ಪೂರ್ವ ಮೈತ್ರಿ ಇದ್ದರೂ ಶಿವಸೇನೆ ಮೈತ್ರಿ ಮುರಿದುಕೊಂಡಿತು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಠ ಮಾಡಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿತು. ಬಿಜೆಪಿ ತಾನು ಸರಕಾರ ರಚನೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತು.
ನಂತರದ ಬೆಳವಣಿಗೆಯಲ್ಲಿ ಎನ್ ಸಿಪಿ, ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧಿಸಲು ಯತ್ನ ಆರಂಭಿಸಿತು. ಈ ಮಧ್ಯೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಯಿತು.
ಮಧ್ಯೆ ಮಧ್ಯೆ ಒಡಕಿನ ಮಾತು ಕೇಳಿ ಬಂದರೂ ಶುಕ್ರವಾರ ರಾತ್ರಿಯವರೆಗಿನ ಬೆಳವಣಿಗೆ ನೋಡಿ ಶನಿವಾರದ ಹೊತ್ತಿಗೆ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ- ಎನ್ ಸಿಪಿ -ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಉದ್ಧವ್ ಠಾಕ್ರೆ ಕೂಡ 5 ಜೊತೆ ಜುಬ್ಬಾಕ್ಕೆ ಆರ್ಡರ್ ಮಾಡಿದ್ದರಂತೆ. ಆದರೆ ಆಗಿದ್ದೇ ಬೇರೆ.
ರಾತ್ರೋ ರಾತ್ರಿ ಏನೆಲ್ಲ ಬೆಳವಣಿಗೆಗಳು ನಡೆದವು. ಬಿಜೆಪಿ -ಎನ್ ಸಿಪಿ ನಡುವೆ ತೆರೆಮರೆಯಲ್ಲೇ ಮಾತುಕತೆ ನಡೆದು ಸರಕಾರದಲ್ಲಿ ಪಾಲುದಾರರಾಗುವ ತೀರ್ಮಾನವಾಗಿತ್ತು. ಇದನ್ನು ರಾಜ್ಯಪಾಲರಿಗೆ ತಿಳಿಸಿ, ರಾಜ್ಯಪಾಲರು ರಾತ್ರಿಯೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಬೆಳಗಿನಜಾವ 5.57ಕ್ಕೆ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ ಪಡೆಯಲಾಯಿತು.
7 ಗಂಟೆ ಹೊತ್ತಿಗೆ ಹೊಸ ಸರಕಾರ ಪ್ರಮಾಣ ವಚನ ಸ್ವೀಕರಿಸಲು ರಾಜಭವನದಲ್ಲಿ ವೇದಿಕೆ ಸಜ್ಜಾಗಿತ್ತು. ಕೇವಲ ಖಾಸಗಿ ಸುದ್ದಿ ಸಂಸ್ಥೆಯ ಕ್ಯಾಮರಾ ಒಂದಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದೆಲ್ಲ ಮಾಧ್ಯಮಗಳು ಬೆಳಗಿನ ಪ್ರಸಾರ ಆರಂಭ ಮಾಡುವ ಹೊತ್ತಿಗೆ ಚಿತ್ರಣವೇ ಬದಲಾಗಿ ಹೋಗಿತ್ತು. ಎಲ್ಲರಿಗೂ ಶಾಕ್ ಕಾದಿತ್ತು.
7 ಗಂಟೆಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಎನ್ ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ ಈ ಎಲ್ಲ ಬೆಳವಣಿಗೆಗಳು ತಮಗೆ ಗೊತ್ತೇ ಇಲ್ಲ ಎಂದು ದೆಹಲಿಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡ ಶಾಕ್ ಆಗಿದ್ದಾರೆ. ಶಿವಸೇನಗೆ ಭಾರಿ ಮುಖಭಂಗವಾಗಿದೆ. ಕೈಗೆ ಬಂದಿದ್ದನ್ನು ಬಿಟ್ಟು ಈಗ ಇಂಗು ತಿಂದ ಮಂಗನಂತಾಗಿದೆ.
ಅಜಿತ್ ಪವಾರಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಬೆಳವಣಿಗೆ ಶರದ್ ಪವಾರ್ ಗೆ ಗೊತ್ತೇ ಇಲ್ಲ ಎಂದು ಶಿವಸೇನಾ ಮುಖಂಡ ಸಂಜಯ ರಾವತ್ ಪ್ರತಿಕ್ರಿಯಿಸಿದ್ದಾರೆ. ಅಜಿತ್ ಪವಾರ್ ಮಹಾರಾಷ್ಟ್ರ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮ್ಯಾಜಿಕ್ ಇಡೀ ದೇಶವನ್ನೇ ಶಾಕ್ ನಲ್ಲಿ ಬೀಳಿಸಿದೆ.
ನೂತನ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದ್ದಾರೆ.
ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ