ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಈ ಉಪಚುನಾವಣೆಗೆ ಕಾಂಗ್ರೇಸ್ ನಾಯಕರ ದುರಹಂಕಾರವೇ ಕಾರಣ. ಅವರಿಂದಲೇ ಉಪಚುನಾವಣೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ. ನಮ್ಮ ವಿರುದ್ಧ ಕಾಂಗ್ರೇಸ್ ನಾಯಕರು ಮಿತಿಮೀರಿ ಪದಬಳಕೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕಾಂಗ್ರೇಸ್ ಪಕ್ಷವನ್ನು ಖಾಲಿ ಮಾಡಿಸುತ್ತೇನೆಂದು ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.
ಶನಿವಾರದಂದು ನಂದಗಾಂವ, ಸಾವಳಗಿ, ಶಿವಾಪೂರ(ಕೊ), ಧುಪದಾಳ ಗ್ರಾಮಗಳಲ್ಲಿ ಮತಯಾಚಿಸಿದ ಬಳಿಕ ಕೊಣ್ಣೂರ ಪಟ್ಟಣದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷ ಇನ್ನಾದರೂ ಪಾಠ ಕಲಿಯಲಿ ಎಂದು ಹೇಳಿದರು.
ನನ್ನೊಂದಿಗೆ ೧೭ ಜನ ಮಾತ್ರ ಅನರ್ಹ ಶಾಸಕರಿಲ್ಲ. ೩೫ ಶಾಸಕರು ನನ್ನೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಇದೇ ದುರಹಂಕಾರ ಮುಂದುವರಿದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನೇ ಖಾಲಿ ಮಾಡಿಸುತ್ತೇನೆ. ನನ್ನ ವಿರುದ್ಧ ಅವಹೇಳನಕಾರಿ ಮಾತನಾಡಿದರೆ ಪರಿಸ್ಥಿತಿ ಸರಿ ಇರುವುದಿಲ್ಲವೆಂದು ಕಾಂಗ್ರೇಸ್ಸಿಗರ ವಿರುದ್ಧ ಹರಿಹಾಯ್ದರು.
ವಿರೋಧಿಗಳು ನಮ್ಮನ್ನು ಅವಮಾನಿಸುತ್ತಲೇ ಇದ್ದಾರೆ. ಹಣಕ್ಕಾಗಿ ಮಾರಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮಗೇನು ಅಧಿಕಾರದ ಲಾಲಸೆ ಇಲ್ಲ. ಒಂದು ವೇಳೆ ಅಧಿಕಾರ ನಡೆಸಬೇಕೆಂದಿದ್ದರೆ ನಾನೇನು ಪಕ್ಷವನ್ನು ತ್ಯಜಿಸುತ್ತಿರಲಿಲ್ಲ. ನನಗೆ ಬೇಕಾಗಿರುವುದು ಕ್ಷೇತ್ರದ ಸಮಗ್ರ ಅಭಿವೃದ್ಧಿ. ಜನರ ಏಳ್ಗೆ. ಇದಕ್ಕಾಗಿಯೇ ಅಲ್ಲಿಂದ ಹೊರ ಬಂದಿದ್ದೇನೆ. ಅಧಿಕಾರಕ್ಕಾಗಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲವೆಂದು ಹೇಳಿದರು.
ದೇವರು, ತಾಯಿ-ತಂದೆ ಹಾಗೂ ಜನರ ಆಶೀರ್ವಾದದಿಂದ ಸುಪ್ರೀಂ ಕೋರ್ಟನಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕೆ ತೀರ್ಪು ಹೊರಬಿತ್ತು. ಆಗಿನ ಸ್ಪೀಕರ ರಮೇಶಕುಮಾರ ಅವರು ಕಾನೂನು ಬಾಹೀರವಾಗಿ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಇದನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಯಾವಾಗ ಕೋರ್ಟನಿಂದ ನಮಗೆ ಸ್ಪರ್ಧಿಸಲಿಕ್ಕೆ ಅವಕಾಶ ಸಿಕ್ಕಿತೋ ಆವಾಗಲೇ ಈ ಚುನಾವಣೆಯಲ್ಲಿ ಜಯ ಸಾಧಿಸಿದಂತಾಗಿದೆ.
ತೀರ್ಪು ಹೊರಬಿದ್ದ ತಕ್ಷಣವೇ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ನಮ್ಮ ಬೆಂಬಲಿಗರು ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಯಾರೂ ನಮ್ಮನ್ನು ನಿಂದಿಸುತ್ತಿದ್ದಾರೋ ಅವರಿಗೆ ತಕ್ಕ ಪಾಠ ಕಲಿಸಲು ಕಮಲ ಗುರ್ತಿಗೆ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ರಮೇಶ್
ಬಿಜೆಪಿಯಿಂದ ಮಾತ್ರ ಈ ರಾಜ್ಯದ ಅಭಿವೃದ್ಧಿಯಾಗುತ್ತದೆ. ಸ್ಥಿರ ಹಾಗೂ ಸುಭದ್ರ ಆಡಳಿತ ಯಡಿಯೂರಪ್ಪನವರಿಂದ ಮಾತ್ರ ಸಾಧ್ಯ. ಕೊಟ್ಟ ಮಾತಿನಂತೆ ನಡೆಯುವುದು ಯಡಿಯೂರಪ್ಪನವರ ಧರ್ಮವಾಗಿದೆ. ನಾವೂ ಕೂಡ ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ರಾಜ್ಯದಲ್ಲಿಯೇ ಗಟ್ಟಿ ವ್ಯಕ್ತಿತ್ವದ ಹಾಗೂ ದಿಟ್ಟ ಮುಖ್ಯಮಂತ್ರಿ ಸಿಕ್ಕಿರುವುದು ರಾಜ್ಯದ ಜನರ ದೈವವಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಗಳನ್ನು ಶ್ಲಾಘಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮಗದುಮ್ಮ ಮಾತನಾಡಿ, ಗೋಕಾಕದಿಂದ ಹೊಸ ಇತಿಹಾಸ ನಿರ್ಮಿಸಲು ರಮೇಶ ಜಾರಕಿಹೊಳಿ ಅವರನ್ನು ಲಕ್ಷ ಮತಗಳಿಂದ ಆಯ್ಕೆ ಮಾಡಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಕೈಗಳನ್ನು ಬಲಪಡಿಸಬೇಕೆಂದು ಕೋರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಘೂಳಪ್ಪ ಹೊಸಮನಿ, ಗ್ರಾಮೀಣ ಘಟಕದ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಡಿ.ಎಂ. ದಳವಾಯಿ, ಎಲ್.ಕೆ. ಗೋಕಾಕ, ಮಹಾದೇವ ದಾನನ್ನವರ, ಸುಧೀರ ಜೋಡಟ್ಟಿ, ಎಸ್.ಐ. ಬೆನವಾಡ, ಮಹೇಶಗೌಡ ಪಾಟೀಲ, ಧನಪಾಲ ನಂದೇಶ್ವರ, ಆದಪ್ಪ ಮಗದುಮ್ಮ, ರಾಜುಗೌಡ ಪಾಟೀಲ, ಜಿ.ಎಸ್. ರಜಪೂತ, ಕಲ್ಲೋಳೆಪ್ಪ ಗಾಡಿವಡ್ಡರ, ರಾಜಶೇಖರಸಿಂಗ್ ರಜಪೂತ, ಮದಾರಸಾಬ ಜಗದಾಳ, ಎ.ಎಸ್. ಪರಪ್ಪನವರ, ಮುಂತಾದವರು ಉಪಸ್ಥಿತರಿದ್ದರು.
ನಂತರ ಮರಡಿಮಠ ಹಾಗೂ ಮಾನಿಕವಾಡ ಗ್ರಾಮಗಳಿಗೆ ತೆರಳಿ ರಮೇಶ ಜಾರಕಿಹೊಳಿ ಮತಬೇಟೆ ನಡೆಸಿದರು.
ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದ್ದರಿಂದ ಹೊರಬರಬೇಕಾಯಿತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ