Kannada NewsKarnataka NewsLatest

ಬೆಳಗಾವಿ ಜಿಲ್ಲೆಯಿಂದ ಐವರು ಸಚಿವರು -ಯಡಿಯೂರಪ್ಪ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಅಥಣಿ -18 ವಿಧಾನಸಬಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಬೆಂಗಳೂರಿನ ನಂತರದ ದೊಡ್ಡ ಜಿಲ್ಲೆ. ಈ ಜಿಲ್ಲೆಯಿಂದ ಸಧ್ಯಕ್ಕೆ ಇಬ್ಬರು ಯಡಿಯೂರಪ್ಪ ಸಚಿವ ಸಂಪುಟದಲ್ಲಿದ್ದಾರೆ.

ಉಮೇಶ ಕತ್ತಿ ಸೇರಿದಂತೆ ಇನ್ನೂ ಕೆಲವರು ಸಚಿವರಾಗುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರಿಗೆಲ್ಲ ಸಚಿವ ಸ್ಥಾನ ನೀಡುತ್ತಾರೋ, ಇಲ್ಲವೋ ಆದರೆ ಯಡಿಯೂರಪ್ಪ ಮಾತು ನಿಜವಾದರೆ ಇನ್ನು 15 ದಿನದಲ್ಲಿ ಬೆಳಗಾವಿ ಜಿಲ್ಲೆಯಿಂದ ಒಟ್ಟೂ ಐವರಿಗೆ ಸಚಿವಸ್ಥಾನ ಒಲಿದು ಬರಲಿದೆ.

ಯಾರಾಗಲಿದ್ದಾರೆ ಹೊಸ ಸಚಿವರು?

ಡಿಸೆಂಬರ್ 5ರಂದು ನಡೆಯಲಿರುವ ವಿಧಾನಸಭೆಯ ಉಪಚುನಾವಣೆ ಪ್ರಚಾರಕ್ಕೆಂದು ಮುಖ್ಯಮಂತ್ರಿ ಬಿ.ಎ,ಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಬೆಳಗ್ಗೆ ಅಥಣಿ ಮತ್ತು ಕಾಗವಾಡ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ನಂತರ ಈಗ ಗೋಕಾಕನತ್ತ ತೆರಳಿದ್ದಾರೆ.

ಕಾಗವಾಡದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿರುವ ಸಿಎಂ ಯಡಿಯೂರಪ್ಪ ಮತ್ತು ಇತರರು

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮಹಾಂತೇಶ ಕವಟಗಿಮಠ, ಉಮೇಶ ಕತ್ತಿ ಸೇರಿದಂತೆ ಜಿಲ್ಲೆಯ ಬಿಜೆಪಿಯ ಎಲ್ಲ ಶಾಸಕರು, ಮಾಜಿ ಸಾಸಕರು, ಪದಾಧಿಕಾರಿಗಳು ಹಲವಾರು ಗಣ್ಯರು ಯಡಿಯೂರಪ್ಪ ಜೊತೆಗಿದ್ದಾರೆ. 

ಅಥಣಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವುದು ಲಕ್ಷ್ಮಣ ಸವದಿ ಜವಾಬ್ದಾರಿ. ಅವರ ಗೌರವದ ಪ್ರಶ್ನೆಯೂ ಹೌದು ಎಂದು ಹೇಳಿದರು. ಲಕ್ಷ್ಮಣ ಸವದಿ ಸರಕಾರದ ಪೂರ್ಣ 3 ವರ್ಷಗಳ ಅವಧಿಗೂ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದೂ ಘೋಷಿಸಿದರು.

ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಎಲ್ಲವೂ ನಿವಾರಣೆಯಾಗಿದೆ. ಲಕ್ಷ್ಮಣ ಸವದಿಯವರೇ ಮುಂದೆ ನಿಂತು ಚುನಾವಣೆ ನಡೆಸಲಿದ್ದಾರೆ. ಈ ಉಪ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂರೂ ಸ್ಥಾನ ಸೇರಿದಂತೆ ಎಲ್ಲ 15 ಸ್ಥಾನಗಳನ್ನೂ ನಾವು ಗೆಲ್ಲಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಉಪಚುನಾವಣೆ ನಂತರ ಗೆಲ್ಲುವ ಎಲ್ಲ 15 ಜನರಿಗೂ ಸಚಿವಸ್ಥಾನ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಅಂದರೆ ಬೆಳಗಾವಿ ಜಿಲ್ಲೆಯಿಂದ ಮೂವರೂ ಸಚಿವಸಂಪುಟ ಸೇರುವುದು ನಿಶ್ಚಿತ ಎಂದು ಅವರು ಹೇಳಿದರು. ಅಂದರೆ, ಈಗಾಗಲೆ ಇಬ್ಬರು ಸಚಿವರಿರುವ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಮೂವರು ಸ್ಥಾನ ಪಡೆಯಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಆದರೆ ಸಚಿವಸ್ಥಾನದ ಆಕಾಂಕ್ಷೆಯಲ್ಲಿರುವ ಉಮೇಶ ಕತ್ತಿ ಮತ್ತಿತರರನ್ನು ಹೇಗೆ ಸಮಾಧಾನಪಡಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದೇ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ಈ ಚುನಾವಣೆ ಮಹೇಶ ಕುಮಟಳ್ಳಿ ಚುನಾವಣೆಯಲ್ಲ, ನನ್ನದೇ ಚುನಾವಣೆ, ಬಿಜೆಪಿ ಚುನಾವಣೆ. ಅಥಮಿ ಮುರಗೇಂದ್ರ ಶಿವಯೋಗಿಗಳ ಪಾದಕ್ಕೆ ಹಣೆಯೊತ್ತಿ ಹೇಳುತ್ತೇನೆ, ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿ ತರುತ್ತೇನೆ ಎಂದು ಘೋಷಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button