*ನಮ್ಮದು ಜನಪರ ನಿಲುವಿನ ಸರಕಾರ* *ರಡ್ಡಿ ಸಮಾಜ ಸೌಹಾರ್ದತೆ, ಸ್ವಾಭಿಮಾನದ ಪ್ರತೀಕ* : *ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ*

ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಡ್ಡಿ ಸಮಾಜ ಸ್ವಾಭಿಮಾನದ ಪ್ರತೀಕ. ಸಮಾಜದಲ್ಲಿನ ಬೆಂಕಿ ಆರಿಸಿ, ಸೌಹಾರ್ದತೆ ಕಾಪಾಡುವ ಸಮಾಜ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಳಗಾವಿಯ ಕೆ ಕೆ ಕೊಪ್ಪದ ಬಳಿ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ನಿರ್ಮಾಣದ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಇಂತಹ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ. ನಾನೇ ಮುಂದೆ ನಿಂತು, ಹೆಗಲಿಗೆ ಹೆಗಲು ಕೊಟ್ಟು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತೇನೆ. ಇದು ನನ್ನದೇ ಸಮಾಜದ ಕಾರ್ಯ ಎಂದು ತಿಳಿದು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ನಮ್ಮ ಸರಕಾರ ಜನರಿಗೋಸ್ಕರ ಇರುವ ಸರಕಾರ. ಜನಪರ ನಿಲುವಿನ ಸರಕಾರ ಎಂದ ಅವರು, ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಸ್ಥಳವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಾನು ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 140 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ ಅವರು ಸೌದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಕ್ರಮ ತೆಗೆದುಕೊಂಡಿದ್ದಾರೆ. ಪ್ರಾಧಿಕಾರ ರಚಿಸಿ ಕೇಂದ್ರ ಸರಕಾರದಿಂದ 110 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜಹಂಸಗಡ ಅಭಿವೃದ್ಧಿಗೂ ಈಗಾಗಲೆ ಒಂದು ಕೋಟಿ ರೂ. ಮಂಜೂರು ಮಾಡಿದ್ದು, ಇನ್ನೂ ಹೆಚ್ಚಿನ ಸಹಾಯ ನೀಡುವ ವಿಶ್ವಾಸವಿದೆ. ಅವರು ನನಗೆ ಆದರ್ಶ ವ್ಯಕ್ತಿ. ಅವರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮುಜರಾಯಿ ಸಚಿವ ರಾಮಲಿಂಗಾ ರಡ್ಡಿ ಮಾತನಾಡಿ, ದೇವಸ್ಥಾನದ ಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನೂ ಕಟ್ಟಿ ಬೆಳೆಸಬೇಕು ಎಂದು ಸಲಹೆ ನೀಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆರಂಭಿಕವಾಗಿ ಒಂದು ಕೋಟಿ ರೂ. ಅನುದಾನ ನೀಡಿ ದೇವಸ್ಥಾನ ನಿರ್ಮಾಣಕ್ಕೆ ನೆರವು ಒದಗಿಸಿದ್ದಾರೆ ಎಂದು ಶ್ಲಾಘಿಸಿದರು.
ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆರಂಭಿಸಬೇಕು. ರಡ್ಡಿ ಸಮಾಜ ಬೇರೆಲ್ಲ ಸಮಾಜಗಳ ಪ್ರೀತಿ ಗಳಿಸಿ ಬೆಳೆಯುತ್ತಿದೆ. ನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಜಾತಿ ಹೆಸರು ಹೇಳಿ ಟಿಕೆಟ್ ಪಡೆಯಲಿಲ್ಲ. ಸಮುದಾಯದ ಸ್ವಾಭಿಮಾನ ಎತ್ತರಿಸುತ್ತ ಇತರ ಸಮುದಾಯಗಳ ಪ್ರೀತಿ, ಗೌರವ ಗಳಿಸುತ್ತಿದ್ದೇವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೇವಸ್ಥಾನ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿದ್ದಾರೆ. ಮುಂದೆ ಯಾವುದೇ ಸಮಸ್ಯೆ ಎದುರಾದರೂ ಅವರು ಜೊತೆಗೆ ನಿಲ್ಲುತ್ತಾರೆ ಎಂದು ಎಚ್.ಕೆ.ಪಾಟೀಲ ಹೇಳಿದರು.
ರಡ್ಡಿ ಗುರುಪೀಠದ ವೇಮನಾನಂದ ಸ್ವಾಮಿಗಳು, ಚಿಕ್ಕ ತಿರುಪತಿ ರೀತಿಯಲ್ಲಿ ಇಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ಈ ಭಾದಲ್ಲಿ ವೆಂಕಟೇಶ್ವರ ದೇವಸ್ಥಾನ ಇಲ್ಲ ಎನ್ನುವ ಕೊರತೆಯನ್ನು ನೀಗಲಿದೆ. ಈ ದೇವಸ್ಥಾನದ ಮೂಲಕ ಎಲ್ಲ ಸಮಾಜವನ್ನೂ ಸೇರಿಸಿಕೊಂಡು ರಡ್ಡಿ ಸಮಾಜವನ್ನು ಸಾರ್ವಜನಿಕಗೊಳಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಶಿಕ್ಷಣ ಸಂಸ್ಥೆಗಳೂ ನಿರ್ಮಾಣವಾಗಲಿವೆ. ಇಲ್ಲಿ ಪುಣ್ಯಕ್ಷೇತ್ರ ಮತ್ತು ಪ್ರವಾಸಿ ಕ್ಷೇತ್ರವಾಗಿ ಬೆಳೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕರಾದ ಆಸೀಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಇಂದಿರಾಬಾಯಿ ಮಳಲಿ, ರೆಡ್ಡಿ ಸಂಘದ ಅಧ್ಯಕ್ಷರೂ, ಬಾಲಾಜಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ರಾಮಣ್ಣ ಮುಳ್ಳೂರು, ಡಾ.ಗಿರೀಶ ಸೋನವಾಲ್ಕರ್, ಎನ್.ವಿ.ಬರಮನಿ, ರಮೇಶ ಜಂಗಲ್, ಪಾಂಡುರಂಗ ರಡ್ಡಿ ಸೇರಿದಂತೆ ಟ್ರಸ್ಟ್ ಪದಾದಿಕಾರಿಗಳು, ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.