Kannada NewsKarnataka NewsLatest

ಆಗ ಬಾಲಚಂದ್ರ, ಈಗ ರಮೇಶ: ಯಡಿಯೂರಪ್ಪಗೆ ಶಕ್ತಿ ತುಂಬಿದ ಸಹೋದರರು

 ಪ್ರಗತಿವಾಹಿನಿ ಸುದ್ದಿ, ಗೋಕಾಕ: 2008ರಲ್ಲಿ ಬಿಜೆಪಿಗೆ ಮೂರು ಸ್ಥಾನಗಳು ಕೊರತೆಯಾದಾಗ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪನವರಿಗೆ ಶಕ್ತಿ ತುಂಬಿದ್ದರು. ಈಗ ರಮೇಶ ಜಾರಕಿಹೊಳಿ  17 ಶಾಸಕರೊಂದಿಗೆ ರಾಜಿನಾಮೆ ನೀಡಿ ಬಿಜಪಿ ಸರಕಾರವನ್ನು ಅಸ್ಥಿತ್ವಕ್ಕೆ ತಂದಿದ್ದಾರೆ.

ಅವರನ್ನು ಈ ಬಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಮೂಲಕ  ಅವರು ಗೋಕಾಕದ ಹುಲಿ ಎಂಬುದನ್ನು ಸಬೀತುಪಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಗೋಕಾಕ ಕ್ಷೇತ್ರದ ಚುನಾವಣೆ ಉಸ್ತುವಾರಿ ಶಶಿಕಲಾ ಜೊಲ್ಲೆ ಕರೆ ನೀಡಿದ್ದಾರೆ.

ಸೋಮವಾರ ತಾಲೂಕಿನ ಮಾಲದಿನ್ನಿ, ಉಪ್ಪಾರಹಟ್ಟಿ ಹಾಗೂ ಮಮದಾಪೂರ ಗ್ರಾಮಗಳಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಗಳಲ್ಲಿ ರಮೇಶ ಜಾರಕಿಹೊಳಿ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ದಿಯಾಗುತ್ತದೆ. ಮುಂದೆ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಮಹತ್ವದ ಸಚಿವಸ್ಥಾನ ಲಭಿಸುತ್ತದೆ. ನಾವಿಂದು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವುದಕ್ಕೆ ರಮೇಶ ಜಾರಕಿಹೊಳಿ ಅವರ ತ್ಯಾಗ ಹಾಗೂ ಕೃಪೆ ಕಾರಣವೆಂದು ಅವರು ಹೇಳಿದರು.

ಕಾರ್ಯಕರ್ತರೇ ಬಿಜೆಪಿಗೆ ಆಸ್ತಿಯಾಗಿದ್ದಾರೆ. ಜೊತೆಗೆ ದೊಡ್ಡ ಶಕ್ತಿಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಬಾಕಿ ಉಳಿದಿರುವ ಅವಧಿಯನ್ನು ನಮ್ಮ ಸರ್ಕಾರ ಪೂರ್ಣಗೊಳಿಸಬೇಕಾದರೆ ಡಿಸೆಂಬರ್ -೫ರಂದು ನಡೆಯುವ ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.

ರಮೇಶ ಜಾರಕಿಹೊಳಿ ಅವರು ಕಾಂಗ್ರೇಸ್ ಪಕ್ಷದಲ್ಲಿ ೨ ದಶಕಗಳಿಂದ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದವರು. ಅಧಿಕಾರದ ಹಿಂದೆ ಎಂದಿಗೂ ಜೋತು ಬೀಳುವ ಮನೋಭಾವದವರಲ್ಲ. ಆದರೆ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರ್ಕಾರದ ಜನವಿರೋಧಿ ಹಾಗೂ ಭ್ರಷ್ಟ ಆಡಳಿತಕ್ಕೆ ಬೇಸತ್ತು, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲಿಕ್ಕೆ ಬಿಜೆಪಿಗೆ ಬಂದು ರಾಜ್ಯದಲ್ಲಿ ದೊಡ್ಡ ಶಕ್ತಿಯನ್ನೇ ತೋರಿಸಿದ್ದಾರೆ. ಅವರ ಕಮಲದ ಗುರ್ತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿಕೊಂಡರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಜಾರಕಿಹೊಳಿ ಸಹೋದರರ ಪಾತ್ರ ಮಹತ್ವದ್ದಾಗಿದೆ. ೨೦೦೮ರಲ್ಲಿ ಬಿಜೆಪಿಗೆ ಮೂರು ಸ್ಥಾನಗಳು ಕೊರತೆಯಾದಾಗ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪನವರಿಗೆ ಶಕ್ತಿ ತುಂಬಿದ್ದರು.

ಶಾಸಕ ಹಾಗೂ ಇನ್ನೋರ್ವ ಉಸ್ತುವಾರಿ ಎ.ಎಸ್.ಪಾಟೀಲ (ನಡಹಳ್ಳಿ) ಮಾತನಾಡಿ,  ರಮೇಶ ಜಾರಕಿಹೊಳಿ ಅವರು ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ಆಸರೆಯಾಗುವ ಮೂಲಕ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಕೆಲವರು ರಮೇಶ ಅವರಿಗೆ ತೋಳ ಬಂತು ತೋಳವೆಂದು ಅಪಹಾಸ್ಯ ಮಾಡುತ್ತಿದ್ದಾರೆ. ಅವರಿಗೀಗ ಉತ್ತರ ನೀಡಲು ಕಾಲ ಸನ್ನಿತವಾಗಿದ್ದು ರಮೇಶ ಅವರು ಗೋಕಾಕದ ಹುಲಿ ಎಂದು ತೋರಿಸಿಕೊಡಲು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಕೋರಿದರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಸವದತ್ತಿ ಶಾಸಕ ಆನಂದ ಮಾಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಉಪಾಧ್ಯಕ್ಷ ಶಾಮಾನಂದ ಪೂಜೇರಿ, ಮಹಾಂತೇಶ ತಾವಂಶಿ, ಗೋವಿಂದ ಕೊಪ್ಪದ, ಸುಭಾಶ ಪಾಟೀಲ ಹಾಗೂ ಆಯಾ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

ನಂತರ ಮರಡಿಶಿವಾಪುರ, ಅಜ್ಜನಕಟ್ಟಿ, ಪಂಚನಾಯಕನಹಟ್ಟಿ, ಚಿಕ್ಕನಂದಿ, ಹಿರೇನಂದಿ, ಹಣಮಾಪೂರ, ಹೂಲಿಕಟ್ಟಿ ಗ್ರಾಮಗಳಿಗೆ ತೆರಳಿ ರಮೇಶ ಜಾರಕಿಹೊಳಿ ಪರ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button