Kannada NewsKarnataka News

ಭಯದ ವಾತಾವರಣದಿಂದ ಹೊರ ಬಂದು ಪರೀಕ್ಷೆ ಬರೆಯಿರಿ: ಡಾ. ಸಂದೀಪ ನಾಯರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಸೇರಿದಂತೆ ಉನ್ನತ ಪರೀಕ್ಷೆಗಳನ್ನು ಬರೆಯುವ ಸಂದರ್ಭದಲ್ಲಿ ಭಯದ ವಾತಾವರಣದಿಂದ ಹೊರ ಬಂದು ಮುಕ್ತವಾಗಿ ಪರೀಕ್ಷೆಗಳನ್ನು ಎದುರಿಸಬೇಕೆಂದು ಉಪನ್ಯಾಸಕ ಡಾ.ಸಂದೀಪ ನಾಯರ ಅವರು ಸಲಹೆ ನೀಡಿದರು.

ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿರುವ ಗೋಪಾಲಜಿ ಇಂಟಿಗ್ರೇಟೆಡ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ಅಕಾಡೆಮಿಕ್ ಓರಿಯಂಟೇಶನ್ ಪ್ರೋಗ್ರಾಂ – ೨೦೧೯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಎಸ್.ಎಸ್.ಎಲ್.ಸಿ. ಪಿಯುಸಿ ಮತ್ತು ಉನ್ನತ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಮೂಡುವುದು ಸಹಜ. ಶಿಕ್ಷಕರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಭಯ ಮುಕ್ತ ವಾತಾವರಣದಲ್ಲಿ ಪರೀಕ್ಷೆಗಳನ್ನು ಬರೆಯುವಂತೆ ಮಾರ್ಗದರ್ಶನ ಮಾಡಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ಅಶ್ವೀನಕುಮಾರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲ ಜಿನಗೌಡ ಫೌಂಡೇಶನ್ ಅಧ್ಯಕ್ಷ ಗೋಪಾಲ ಜಿನಗೌಡ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಪಿಯು ಕಾಲೇಜಿನ ಕಾರ್ಯದರ್ಶಿ ಸಂದೀಪ ಚಿಪ್ರೆ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶರದ ಬಾಳಿಕಾಯಿ, ಖಜಾಂಚಿ ಹುಕುಮಚಂದ ರತ್ತು, ಕಾಲೇಜಿನ ಪ್ರಾಚಾರ್ಯ ಕಾಶೀನಾಥ ಶೃಂಗೇರಿ ಮೊದಲಾದವರು ಉಪಸ್ಥಿತರಿದ್ದರು.

ಚೇತನ ಕರಿಮುದಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ತಿಗಡಿ ವಂದಿಸಿದರು. ಈ ಒಂದು ದಿನದ ಕಾರ್ಯಾಗಾರದಲ್ಲಿ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಶಾಲೆಗಳ ಸುಮಾರು ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button