
ಪ್ರಗತಿವಾಹಿನಿ ಸುದ್ದಿ: ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕನನ್ನು ಬಿಟ್ಟು 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆದರೆ ಅದೇ ವಿಮಾನದ ಮೂಲಕ ಲಂಡನ್ ಗೆ ತೆರಳುತಿದ್ದ ಮಹಿಳೆ ಬಚಾವ್ ಆಗಿದ್ದಾಳೆ.
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ವಿಮಾನದಲ್ಲಿ ಒಂದು ಸೀಟ್ ಖಾಲಿ ಇತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಓರ್ವ ಮಹಿಳೆ ಆ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿ, ಎಲ್ಲಾ ಪ್ರಯಾಣಿಕರ ಜೊತೆ ಸಾವನ್ನಪ್ಪುತ್ತಿದ್ದಳು. ಆದ್ರೆ, ಅಹ್ಮದಾಬಾದ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿದ್ದಾರೆ.
ಎರಡು ವರ್ಷಗಳ ನಂತರ ಭಾರತಕ್ಕೆ ಬಂದು, ಮತ್ತೆ ಲಂಡನ್‌ನಲ್ಲಿರುವ ಪತಿಯನ್ನ ಸೇರಬೇಕೆಂಬ ತವಕದಲ್ಲಿದ್ದ ಭೂಮಿಗೆ, ಟ್ರಾಫಿಕ್ ತೀವ್ರ ಕಿರಿಕಿರಿ ಎನಿಸಿತ್ತು. ಕೊನೆಗೂ ಏರ್‌ಪೋರ್ಟ್ ತಲುಪಿದಾಗ ತಿಳಿಯಿತು. ತಾವು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಎಐ-171 ಟೇಕಾಫ್ ಆಗಿದೆ. ಈ ವಿಚಾರ ಅವರಿಗೆ ಭಾರೀ ನಿರಾಸೆ ತಂದಿತ್ತು.
ಆದರೆ ತಾನು ಹತ್ತಬೇಕಿದ್ದ ವಿಮಾನ ಟೇಕಾಫ್ ಆದ ಐದೇ ನಿಮಿಷದಲ್ಲಿ ಪತನಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು, ಒಂದು ಕ್ಷಣ ಮಹಿಳೆ ದಿಕ್ಕೆ ತೋಚದಂತೆ ಮೌನಕ್ಕೆ ಶರಣಾಗಿದ್ದಾರೆ.
ಲಂಡನ್‌ಗೆ ಹೋಗಬೇಕಿತ್ತು. ಮಧ್ಯಾಹ್ನ 1:10ಕ್ಕೆ ವಿಮಾನ ಇತ್ತು. ನಾನು ಏರ್‌ಪೋರ್ಟ್ ತಲುಪುವಷ್ಟರಲ್ಲಿ 12:20 ಆಗಿತ್ತು. 12:10ಕ್ಕೆ ಎರ್‌ಇಂಡಿಯಾ ಚೆಕ್ ಇನ್ ನಿಲ್ಲಿಸಿತ್ತು. ಚೆಕ್ ಇನ್ ಗೇಟ್ ಬಳಿ ಹೋಗಿ 10 ನಿಮಿಷ ಅಷ್ಟೇ ತಡವಾಗಿದೆ, ಬೇಗ ಬೇಗ ಎಲ್ಲಾ ಪ್ರಕ್ರಿಯೆ ಮುಗಿಸಿ ಎಂದು ಮನವಿ ಮಾಡಿದೆ. ಹಿರಿಯ ಅಧಿಕಾರಿಗಳು ಕೂಡಾ ನಿರಾಕರಿಸಿದರು ಎಂದು ಭೂಮಿ ಹೇಳಿದ್ದಾರೆ.
ಒಟ್ಟಿನಲ್ಲಿ ವಿಮಾನ ತಪ್ಪಿದ್ದಕ್ಕೆ ನಿರಾಸೆಗೊಂಡಿದ್ದ ಭೂಮಿ, ಇದೀಗ ಅದೇ ಟ್ರಾಫಿಕ್ ತನ್ನ ಜೀವ ಉಳಿಸಿದೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.