
ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ನಂದಕಿಶೋರ್ ವಿರುದ್ಧ ಯುವನಟ ಶಬರೀಶ್ ಶೆಟ್ಟಿ ವಂಚನೆ ಆರೋಪ ಮಾಡಿದ್ದಾರೆ. 22 ಲಕ್ಷ ಹಣ ಪಡೆದು ಹಿಂತಿರುಗಿಸದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ನಂದಕಿಶೋರ್ ನನಗೆ ಜಿಮ್ ವೊಂದರಲ್ಲಿ ಪರಿಚಯವಾಗಿದ್ದರು. ಚಿನ್ನ ಅಡವಿಟ್ಟು ನಂದಕಿಶೋರ್ ಗೆ 22 ಲಕ್ಷ ರೂಪಾಯಿ ಹಣ ಕೊಟ್ಟಿದ್ದೆ. ಆ ಹಣವನ್ನೂ ಇನ್ನೂ ವಾಪಸ್ ಕೊಟ್ಟಿಲ್ಲ. ಹಣ ಕೇಳಿದರೆ ಧಮ್ಕಿ ಹಾಕುತ್ತಿದ್ದಾರೆ ಎಂದು ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.
ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಹಣವನ್ನೂ ಹಿಂತಿರುಗಿಸಿಲ್ಲ, ಸಿನಿಮಾದಲ್ಲಿಯೂ ಅವಕಾಶ ಕೊಟ್ಟಿಲ್ಲ. ಈಗ ಹಣ ಕೇಳಿದರೆ ಕೆಸಿಸಿ ಟೂರ್ನಿಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಸುದೀಪ್ ಸರ್ ಜೊತೆ ಆಡುವ ಆಸೆಯಿಂದ ಸುಮ್ಮನಿದ್ದೇನೆ. ಈ ವಿಚಾರ ಸುದೀಪ್ ಸರ್ ಗಮನಕ್ಕೆ ತರಲು ಮುಂದಾದ ವೇಳೆ ನಂದಕಿಶೋರ್ ನನ್ನನ್ನು ತಡೆದರು. ಹಣ ಕೊಡದಿದ್ದರೆ ನಂದಕಿಶೋರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಫಿಲ್ಮ್ ಚೇಂಬರ್ ಗೂ ದೂರು ಕೊಡುತ್ತೇನೆ ಎಂದು ಶಬರೀಶ್ ತಿಳಿಸಿದ್ದಾರೆ.