*ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಡಿಸಿ ಮೊಹಮ್ಮದ್ ರೋಷನ್ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ ಕುರಿತು ದೂರುಗಳು ದಾಖಲಾದಲ್ಲಿ ಸಂಬಂಧಿಸಿದ ದೂರುಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬ ತೋರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಜೂ.21) ನಡೆದ ಪರಿಶಿಷ್ಟ ಜಾತಿ/ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಸಮಿತಿ ಸದಸ್ಯರನ್ನು ಠಾಣೆ ವ್ಯಾಪ್ತಿಯ ಪ.ಜಾತಿ ಹಾಗೂ ಪ.ಪಂಗಡಗಳ ಕುಂದು ಕೊರತೆಗಳ ಸಭೆಗೆ ಆಹ್ವಾನಿಸಿದರೆ ಇದರಿಂದ ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ
ವಿವಿಧ ಸಂಘಟನೆಗಳ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ನಗರದ ಆರ್.ಪಿ.ಡಿ. ವೃತ್ತದಲ್ಲಿ ವೀರಮದಕರಿ ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದ ವಿಷಯವನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಮಂಡಿಸಲು ಆದ್ಯತೆಯ ಮೇರೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಅದಕ್ಕೂ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರಕಾರದ ಮಾರ್ಗಸೂಚಿ ಪ್ರಕಾರ ವರದಿಯನ್ನು ಸಿದ್ಧಪಡಿಸಬೇಕು. ಈ ವರದಿ ಆಧರಿಸಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಚರ್ಚಿಸಿ ಸರಕಾರದ ಮಾರ್ಗಸೂಚಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಸರ್ಕಾರದಿಂದ ವಿತರಿಸುವ ಸಾಲಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಪೌರ ಕಾರ್ಮಿಕರಿಗೆ ಅಗತ್ಯದ ರಕ್ಷಣಾ ಸಾಮಗ್ರಿಗಳನ್ನು ಶೀಘ್ರವೇ ವಿತರಿಸಲು ಕ್ರಮ ಕೈಗೋಳ್ಳುವಂತೆ ತಿಳಿಸಿದರು.
ತುರ್ತು ವೈದ್ಯಕೀಯ ಚಿಕಿತ್ಸೆಗೆ ಸೂಚನೆ
ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವಂತಹ ಪ.ಜಾ,ಪ.ಪಂಗಡದ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆಗೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಜಾತಿ ಪ್ರಮಾಣ ಪತ್ರದ ನೆಪವೊಡ್ಡಿ ಚಿಕಿತ್ಸೆ ನೀಡಲು ನಿರಾಕರಿಸದಂತೆ ತಿಳಿಸಿದರು. ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳು ಆಸ್ಪತ್ರೆಗೆ ಬರುವಂತಹ ಜನರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಹೇಳಿದರು.
ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಉಂಟಾಗುತ್ತಿರುವ ವಿಷಯವನ್ನು ಕೆಲದಿನಗಳ ಹಿಂದೆ ಜರುಗಿದ ಮಾನ್ಯ ಮುಖ್ಯಮಂತ್ರಿಗಳ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರಕಾರಿ ನೌಕರರ ಪದೋನ್ನತಿಗೆ ವಿಳಂಬವಾಗುತ್ತಿರುವ ಕುರಿತು ವರದಿ ನೀಡಲು ತಿಳಿಸಿದರು.
ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ನಿರ್ದೇಶನ
ನ್ಯಾಯಾಲಯಗಳಲ್ಲಿ ಬಾಕಿ ಇರುವ ದೌರ್ಜನ್ಯ ಪ್ರಕರಣಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಈ ವರ್ಷ ಬ್ಯಾಂಕ್ ಗಳಲ್ಲಿ ಶೇಕಡಾ 70% ಬ್ಯಾಂಕ್ ಗಳಲ್ಲಿ ಲೋನ್ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದರು.
ಪೊಲಿಸ್ ಕಮಿಷನರ ಭೂಷಣ ಗುಲಾಬರಾಬ್ ಬೊರಸೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸುಗಮ ಸಂಚಾರ ವ್ಯವಸ್ಥೆ ಹಾಗೂ ಸರಗಳ್ಳತನ ಕುರಿತು ಹೆಚ್ಚಿನ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಇವುಗಳ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಕರೆಪ್ಪ ಗುಡೇನ್ನವರ ಅವರು ಮಾತನಾಡಿ ಕೆಲ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅಂತ್ಯಕ್ರಿಯೆಗೆ ಆಸ್ಪದೆ ನೀಡದೆ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು. ಸರಕಾರಿ ಕಚೇರಿಗಳಲ್ಲಿ ಪ.ಜಾತಿ/ಪ.ಪಂಗಡದ ನೌಕರರಿಗೆ ಕಾರ್ಯ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿರುವ ಕುರಿತು ಮಾತನಾಡಿ, ಪ್ರತಿ ಮಾಹೆ ಪೋಲಿಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದವರೊಂದಿಗೆ ಸಭೆ ಜರುಗಿಸಲು ಸಭೆಗೆ ಮನವಿ ಮಾಡಿದರು.
ಸಮಿತಿ ಸದಸ್ಯರಾದ ಮಲ್ಲೇಶ ಚೌಗಲೆ ಅವರು ಮಾತನಾಡಿ ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಪೌರ ಕಾರ್ಮಿಕರಿಗೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಪೂರೈಸಲು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ದಾಖಾಲಾಗುವ ಪರಿಶಿಷ್ಟ ಜಾತಿ, ಪ.ಪಂಗಡದ ಜನರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡುತ್ತಿರುವ ಕುರಿತು ಸಭೆಯ ಗಮನಕ್ಕೆ ತಂದರು. ಅಲ್ಲದೇ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಮನವಿ ಮಾಡಿದರು.
ಸಮಿತಿ ಸದಸ್ಯರಾದ ವಿಜಯ ತಳವಾರ ಮಾತನಾಡಿ ಬೆಳಗಾವಿ ಆರ್. ಪಿ.ಡಿ ವೃತ್ತದ ಬಳಿ ವೀರ ಮದಕರಿ ನಾಯಕರ ಪ್ರತಿಮೆ ಸ್ಥಾಪಿಸಲು ಕೋರಿ ಕಳೆದ 5 ವರ್ಷಗಳಿಂದ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಗೆ ಈಗಾಗಲೇ ನಿಯಮಾನುಸಾರ ಮನವಿ ಸಲ್ಲಿಸಲಾಗಿದೆ ಇದಕ್ಕೆ ಅನುಮತಿ ನೀಡಬೇಕು ಎಂದು ವಿನಂತಿ ಮಾಡಿಕೊಂಡರು.
ಸಭೆಯಲ್ಲಿ ಬಾಲ್ಯ ವಿವಾಹ ನಿಯಂತ್ರಣ, ಕಳ್ಳತನ,ಮಾದಕ ವಸ್ತುಗಳ ಮಾರಾಟ ನಿಯಂತ್ರಣ ಸೇರಿದಂತೆ ವಿವಿಧ ಚಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಸಿದ್ದರಾಯ ಮೇತ್ರಿ, ಬಸಪ್ಪ ತಳವಾರ, ಜೀವನ ಮಾಂಜ್ರೇಕರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ ಸೇರಿಯಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.