*ಗೃಹಲಕ್ಷ್ಮಿ ಹಣದಿಂದ ಮಗನ ಎಂಬಿಬಿಎಸ್ ಫೀಸ್, ಮಗಳ ವಿದೇಶ ಪ್ರವಾಸ*: *ಮಹಿಳೆಯರ ಯಶೋಗಾಥೆ ಕೇಳಿ ಭಾವುಕರಾದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ 2 ಸಾವಿರ ರೂಪಾಯಿಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಹಲವು ಯಶೋಗಾಥೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಸಂವಾದದಲ್ಲಿ ಅನಾವರಣಗೊಂಡವು.
ಮಗನ ಎಂಬಿಬಿಎಸ್ ಶಿಕ್ಷಣದ ಶುಲ್ಕ ಪಾವತಿಸಿದ ತಾಯಿ, ಮಗಳ ನೃತ್ಯ ಪ್ರದರ್ಶನಕ್ಕಾಗಿ ಮಲೇಷ್ಯಾಕ್ಕೆ ಕಳುಹಿಸಿದ ಕುಟುಂಬ, ಹೊಲಿಗೆ ಯಂತ್ರ ಖರೀದಿಸಿ ಉದ್ಯೋಗ ಸೃಷ್ಟಿಸಿದ ಮಹಿಳೆ, ಐದು ಕುರಿಗಳಿಂದ ಆರಂಭಿಸಿ 300 ಕುರಿಗಳನ್ನು ಸಾಕುತ್ತಿರುವ ಸ್ವಸಹಾಯ ಗುಂಪಿನ ಸದಸ್ಯೆಯರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯರು ತಮ್ಮ ಸಾಧನೆಯ ಕಥೆಗಳನ್ನು ಹಂಚಿಕೊಂಡರು.
ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರ ಅನುಭವಗಳನ್ನು ಆಲಿಸಿದ ಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.
ಮಗನ ಎಂಬಿಬಿಎಸ್ ಫೀಸ್ ಕಟ್ಟಿದ ತಾಯಿ
ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಮಾತನಾಡಿ, ತಮ್ಮ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರ ರೂಪಾಯಿ ಶಿಕ್ಷಣ ಶುಲ್ಕ ಪಾವತಿಸಿರುವುದಾಗಿ ತಿಳಿಸಿದರು. ಶಕ್ತಿ ಯೋಜನೆಯಿಂದ ಉಚಿತ ಬಸ್ ಪ್ರಯಾಣದ ಸೌಲಭ್ಯ ದೊರೆತಿರುವುದರಿಂದ ಮಗನನ್ನು ಆಗಾಗ್ಗೆ ಭೇಟಿ ಮಾಡಲು ಅನುಕೂಲವಾಗಿದೆ ಎಂದರು.
ಮಗ ಪಿಯುಸಿಯಲ್ಲಿ ಶೇ.98 ಅಂಕ ಗಳಿಸಿರುವುದಾಗಿ ತಾಯಿ ಹೇಳಿದಾಗ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.
ಮಗಳನ್ನು ಮಲೇಷ್ಯಾಕ್ಕೆ ಕಳುಹಿಸಲು ನೆರವಾದ ಗೃಹಲಕ್ಷ್ಮಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಹಿಳೆಯೊಬ್ಬರು ತಮ್ಮ ಮಗಳು ಆಶಾಗೆ ನೃತ್ಯದಲ್ಲಿ ಆಸಕ್ತಿ ಇದ್ದು, ನೃತ್ಯ ಪ್ರದರ್ಶನಕ್ಕಾಗಿ ಮಲೇಷ್ಯಾಕ್ಕೆ ಕಳುಹಿಸಲು ಗೃಹಲಕ್ಷ್ಮಿ ಹಣ ಹಾಗೂ ಕುಟುಂಬದ ಉಳಿತಾಯ ನೆರವಾಗಿದೆ ಎಂದು ಹೇಳಿದರು. ಈ ಮಾತಿಗೆ ಸಭಾಂಗಣದಲ್ಲಿ ಚಪ್ಪಾಳೆ ಮೊಳಗಿತು.
ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ
ತುಮಕೂರಿನ ತ್ರಿವೇಣಿ ಬಸವರಾಜ್ ಅವರು ಗೃಹಲಕ್ಷ್ಮಿ ಹಣದೊಂದಿಗೆ ಉಳಿತಾಯದ ಮೊತ್ತ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ ಸಿರಿಧಾನ್ಯ, ರಾಗಿ ಉತ್ಪನ್ನಗಳ ವ್ಯಾಪಾರ ವಿಸ್ತರಿಸಿರುವುದಾಗಿ ತಿಳಿಸಿದರು. ತಾವು ತಯಾರಿಸುವ ಚಕ್ಕುಲಿ, ಕೋಡುಬಳೆ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಹೊರರಾಜ್ಯ ಹಾಗೂ ವಿದೇಶಗಳಿಗೂ ಕಳುಹಿಸುತ್ತಿರುವುದಾಗಿ ವಿವರಿಸಿದರು.
ತರೀಕೆರೆಯ ಲಂಬಾಣಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಲಂಬಾಣಿ ಕಸೂತಿ ಉದ್ಯಮ ಆರಂಭಿಸಿರುವುದಾಗಿ ತಿಳಿಸಿದರು.
ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಖರೀದಿಸಿದ ಸಿಎಂ
ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ತಾವು ತಂದಿದ್ದ ಆಟಿಕೆ ತೊಟ್ಟಿಲನ್ನು ಮುಖ್ಯಮಂತ್ರಿಗೆ ನೀಡಲು ಮುಂದಾದಾಗ, ಅದನ್ನು ತಮ್ಮ ಮೊಮ್ಮಗಳಿಗೆ ಕೊಡುವುದಾಗಿ ಹೇಳಿದ ಸಿಎಂ, 500 ರೂಪಾಯಿ ನೀಡಿ ತೊಟ್ಟಿಲನ್ನು ಖರೀದಿಸಿದರು.
ಐದು ಕುರಿಗಳಿಂದ 300 ಕುರಿಗಳವರೆಗೆ!
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಬ್ಬರು ತಮ್ಮ ಸ್ವಸಹಾಯ ಗುಂಪಿನ ಸದಸ್ಯೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಐದು ಕುರಿಗಳಿಂದ ಕುರಿ ಸಾಕಾಣಿಕೆ ಆರಂಭಿಸಿ ಇಂದು 300 ಕುರಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಕುರಿ ಮೇಯಿಸಲು ಐದು ಜನರಿಗೆ ಉದ್ಯೋಗ ಕಲ್ಪಿಸಿರುವುದಾಗಿ ಹೇಳಿದಾಗ ಸಭೆಯಲ್ಲಿ ಮೆಚ್ಚುಗೆಯ ಚಪ್ಪಾಳೆ ವ್ಯಕ್ತವಾಯಿತು.
ಇದೇ ರೀತಿ ಚಿತ್ರದುರ್ಗದ ವಿಧವೆಯೊಬ್ಬರು ರೊಟ್ಟಿ ಮಾರಾಟದಿಂದ ಜೀವನ ನಡೆಸುತ್ತಿದ್ದು, ಗೃಹಲಕ್ಷ್ಮಿ ಹಣದಲ್ಲಿ ರೊಟ್ಟಿ ತಯಾರಿಸುವ ಯಂತ್ರ ಖರೀದಿಸಿ ಇಬ್ಬರು ಸಹಾಯಕಿಯರಿಗೆ ಉದ್ಯೋಗ ನೀಡಿದ್ದಾರೆ. ರಾಯಚೂರಿನ ಮಹಿಳೆಯೊಬ್ಬರು ಹೊಲಿಗೆ ಯಂತ್ರ ಖರೀದಿಸಿ ಸ್ವಾವಲಂಬಿಯಾಗಿರುವುದಲ್ಲದೆ ಮೂವರಿಗೆ ಉದ್ಯೋಗ ಕಲ್ಪಿಸಿದ್ದಾರೆ.
ವಿಜಯಪುರದ ಮಹಿಳೆ ಜರ್ಸಿ ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿರುವುದಾಗಿ, ಮತ್ತೊಬ್ಬ ಮಹಿಳೆ ಮಗಳ ಕರಾಟೆ ತರಬೇತಿಗೆ ಹಣ ಬಳಸಿದ್ದು, ಮಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿರುವುದಾಗಿ ತಿಳಿಸಿದರು. ಶಿವಮೊಗ್ಗದ ಮಹಿಳೆಯೊಬ್ಬರು ಕೋಳಿ ವ್ಯಾಪಾರ ಆರಂಭಿಸಿರುವ ಯಶೋಗಾಥೆಯನ್ನೂ ಹಂಚಿಕೊಂಡರು.
ಜಾನಪದ ಗೀತೆಯಿಂದ ಗೃಹಲಕ್ಷ್ಮಿ ಯೋಜನೆಯ ಕಲ್ಪನೆ
ಗೃಹಲಕ್ಷ್ಮಿ ಯೋಜನೆಯ ಹುಟ್ಟಿನ ಹಿಂದಿನ ಪ್ರೇರಣೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಿದರು.
ಜಾನಪದ ಗೀತೆಯೊಂದರ ಸಾಲುಗಳು ತಮ್ಮ ಮನಸ್ಸಿನಲ್ಲಿ ಮಹಿಳೆಯರ ಬದುಕಿಗೆ ನೆರವಾಗುವ ಯೋಜನೆಯ ಕಲ್ಪನೆ ಮೂಡಲು ಕಾರಣವಾದವು. ಒಂದು ರಾತ್ರಿ ತಮ್ಮ ಸಂಬಂಧಿಕರು ಹಾಡಿದ, ತಾಯಿ ಇಲ್ಲದ ಹೆಣ್ಣುಮಗಳ ನೋವನ್ನು ಬಿಂಬಿಸುವ ಜಾನಪದ ಗೀತೆಯನ್ನು ಕೇಳಿದಾಗ ಮಹಿಳೆಯರಿಗೆ ಶಕ್ತಿ ತುಂಬುವ ಆಲೋಚನೆ ಬಂದಿತು. ಅದರ ಫಲವಾಗಿ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು ಎಂದು ತಿಳಿಸಿದರು.
86 ಸಾವಿರ ಕೋಟಿ ರೂ. ವೆಚ್ಚ
ಗೃಹಲಕ್ಷ್ಮಿ ಯೋಜನೆಗಾಗಿ ಈವರೆಗೆ ಸುಮಾರು 86 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಯೋಜನೆಯ ಫಲಾನುಭವಿಗಳ ಸಂಖ್ಯೆ 1.24 ಕೋಟಿ ದಾಟಿದೆ. ಯೋಜನೆಯ ವೆಚ್ಚ ಒಂದು ಲಕ್ಷ ಕೋಟಿ ರೂಪಾಯಿ ತಲುಪಿದಾಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ ಆಯೋಜಿಸಲಾಗುವುದು ಎಂದು ಸಿಎಂ ಘೋಷಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ ಯೋಜನೆಗೆ ಚಾಲನೆ ನೀಡಿದ ಸಂದರ್ಭವನ್ನೂ ಸ್ಮರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಯೋಜನೆ ಅನುಷ್ಠಾನಗೊಂಡಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಸರ್ಕಾರ ಕೊಟ್ಟ ಮಾತಿನಂತೆ ಎಲ್ಲ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬೇರೆ ರಾಜ್ಯಗಳು ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿದರೂ ಕರ್ನಾಟಕದಂತೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ ಎಂದು ಹೇಳಿದರು.
ಗೃಹಲಕ್ಷ್ಮಿ ಫಲಾನುಭವಿಗಳ ಮರು ಪರಿಶೀಲನೆ
ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಅಕ್ರಮ ಹಾಗೂ ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ವಿವರಗಳನ್ನು ಮರು ಪರಿಶೀಲಿಸಲು ಸರ್ಕಾರ ಮುಂದಾಗಿದೆ ಎಂದು ಸಿಎಂ ತಿಳಿಸಿದರು.
ಒಂದು ಲಕ್ಷಕ್ಕೂ ಹೆಚ್ಚು ಮೃತರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು, ಬೇರೆ ರಾಜ್ಯಗಳ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿರುವುದು ಹಾಗೂ ಫಲಾನುಭವಿಗಳ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಗೆ ಬದಲಾಗಿ ಬೇರೆಯವರ ದೂರವಾಣಿ ಸಂಖ್ಯೆಗಳು ದಾಖಲಾಗಿರುವುದು ಗಮನಕ್ಕೆ ಬಂದಿದೆ ಎಂದರು.
ಶೇ.30ರಿಂದ 35ರಷ್ಟು ಫಲಾನುಭವಿಗಳ ದಾಖಲೆಗಳಲ್ಲಿ ಬೇರೆಯವರ ಮೊಬೈಲ್ ಸಂಖ್ಯೆಗಳಿರುವುದು ಕಂಡುಬಂದಿದೆ. ಹೀಗಾಗಿ ಫಲಾನುಭವಿಗಳು ತಮ್ಮದೇ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸರ್ಕಾರದಿಂದ ಬರುವ ಮಾಹಿತಿ ಮತ್ತು ಸಂದೇಶಗಳು ನೇರವಾಗಿ ಅವರಿಗೆ ತಲುಪಬೇಕು ಎಂದು ಮನವಿ ಮಾಡಿದರು.
ಮೀಟರ್ ಬಡ್ಡಿ, ಚೀಟಿ ವ್ಯವಹಾರದಿಂದ ದೂರವಿರಿ
ಗೃಹಲಕ್ಷ್ಮಿ ಹಣವನ್ನು ಮೀಟರ್ ಬಡ್ಡಿ ಹಾಗೂ ಚೀಟಿ ವ್ಯವಹಾರಗಳಲ್ಲಿ ತೊಡಗಿಸಬಾರದು ಎಂದು ಮಹಿಳೆಯರಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಕೆಲವರು ಬೆಳಗ್ಗೆ 2 ಸಾವಿರ ರೂಪಾಯಿ ಸಾಲ ಪಡೆದು ಸಂಜೆ ಹಣ ಹಿಂದಿರುಗಿಸುವಾಗ ಶೇ.10ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇಂತಹ ವ್ಯವಹಾರಗಳಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದರು.
ಚೀಟಿ ವ್ಯವಹಾರದಲ್ಲಿಯೂ ಕೊನೆಯಲ್ಲಿ ಹಣ ಕಟ್ಟಿದವರಿಗೆ ಹಣ ಸಿಗದೆ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ವ್ಯವಹಾರಗಳಿಂದ ದೂರವಿರುವಂತೆ ಸಲಹೆ ನೀಡಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಂದ ಸಾಲದ ಮೊತ್ತ ಕಡಿತವಾಗುತ್ತಿರುವ ದೂರುಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಮಹಿಳೆಗೆ ಸಚಿವ ಸ್ಥಾನ
ಮುಂದಿನ ಅಧಿವೇಶನಕ್ಕೂ ಮುನ್ನ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೃಹಲಕ್ಷ್ಮಿ ಫಲಾನುಭವಿಗಳ ಸಮಸ್ಯೆಗಳನ್ನು ಅರಿಯಲು ಸಂವಾದ ಮತ್ತು ಸಮೀಕ್ಷೆ ನಡೆಸಲಾಗುತ್ತಿದೆ. ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಸಮಿತಿಗಳನ್ನು ರಚಿಸಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಕ್ಕಳ ಶಿಕ್ಷಣ, ಉದ್ಯಮ, ವ್ಯಾಪಾರ ಹಾಗೂ ಕುಟುಂಬದ ಅಗತ್ಯಗಳಿಗೆ ಬಳಸಿಕೊಂಡಿರುವ ಮಹಿಳೆಯರ ಸಾಧನೆಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ ಸಿಎಂ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.



