
ಪ್ರಗತಿವಾಹಿನಿ ಸುದ್ದಿ: ಲಾರಿಯನ್ನು ತಪ್ಪಿಸಲು ಹೋಗಿ ಕಾರೊಂದು ಬೃಹತ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿಯ ರುಂಡ ಹಾಗೂ ಎಡಗೈ ದೇಹದಿಂದ ತುಂಡಾಗಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತ ಗರ್ಭಿಣಿಯನ್ನು ಅರ್ಚನಾ ಎಂದು ಗುರುತಿಸಲಾಗಿದೆ. ಅರ್ಚನಾರನ್ನು ಮಾವ ನಾರಾಯಣಸ್ವಾಮಿ ಎಂಬುವವರು ಅವರ ಗ್ರಾಮವಾದ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಲಾರಿಯೊಂದು ಬಂದಿದೆ. ಎದುರಿನಿಂದ ವೇಗವಾಗಿ ಲಾರಿ ಬರುವುದನ್ನು ಗಮನಿಸಿದ ನಾರಾಯಣಸ್ವಾಮಿ ಲಾರಿ ತಪ್ಪಿಸಲು ಮುಂದಾಗಿದ್ದಾರೆ. ಈ ವೇಳೆ ಕಾರು ಬೃಹತ್ ಮರಕ್ಕೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಚಾಲಕನ ಎಡ ಭಾಗದಲ್ಲಿ ಕುಳಿತಿದ್ದ ಅರ್ಚನಾ ಅವರ ರುಂಡ ಹಾಗೂ ಎಡಗೈ ದೇಹದಿಂದ ಕತ್ತರಿಸಿ ಹೋಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಮಾವ ನಾರಾಯಣಸ್ವಾಮಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.