
ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಯುವಕ: ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಸಾವಿಗೆ ಶರಣಾಗುತ್ತಿರುವವರ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲೋರ್ವ ಯುವಕ ಲಕ್ಷ ಲಕ್ಷ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಮೊರೆಯಿಟ್ಟು ಹತಾಶನಾಗಿ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಸರಸ್ವತಿ ನಗರದಲ್ಲಿ ಈ ಘಟನೆ ನಡೆದಿದೆ. ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. CROWN-246 ಎಂಬ ಆನ್ ಲೈನ್ ಗೇಮ್ ಆಡಿ ಯುವಕ 3ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದನಂತೆ.
ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಎಸ್ ಪಿಗಳಿಗೂ ಪತ್ರ ಬರೆದು ಮನವಿ ಮಾಡಿದ್ದನಂತೆ ಆದರೆ ಆತನ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಆನ್ ಲೈನ್ ಗೇಮ್ ವಂಚಕರ ವಿರುದ್ಧ ಕ್ರಮ ಕೂಡ ಆಗಿಲ್ಲ. ಇದರಿಂದ ಮನನೊಂದ ಯುವಕ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಬರೆದಿರುವ ಪತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.