*ಸಾಗರದಾಚೆಗೂ ಬಸವಧರ್ಮವನ್ನು ವಿಸ್ತರಿಸಿದ್ದು ನಾಡಿನ ಹೆಮ್ಮೆ: ಡಾ.ಪ್ರಭಾಕರ ಕೋರೆ*


ಪ್ರಗತಿವಾಹಿನಿ ಸುದ್ದಿ: ಭಾರತದಿಂದ ಸಾವಿರಾರು ಮೈಲು ದೂರವಿರುವ ನೀವೆಲ್ಲರೂ ಬಸವ ಧರ್ಮವನ್ನು ಸಾಗರದಾಚೆಗೂ ಜೀವಂತಗೊಳಿಸಿದ್ದೀರಿ. ನಿಮ್ಮೆಲ್ಲರ ಬಸವಾಭಿಮಾನಕ್ಕೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಕಡಿಮೆ. ಬಸವಣ್ಣನವರು ವಿಶ್ವಸಂದೇಶವನ್ನು ನೀಡಿದ ಮಹಾಮಾನವತಾವಾದಿ ಅವರು ವಿಶ್ವವಿಭೂತಿಪುರುಷರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಅವರು ಉತ್ತರ ಅಮೇರಿಕಾದ ಡೆಟ್ರಾö್ಯಟ್ ನಗರದಲ್ಲಿ ಜುಲೈ 4 ರಿಂದ 6ರವರೆಗೆ ವೀರಶೈವ ಸಮಾಜ ಆಯೋಜಿಸಿದ 47ನೇ (ವಿಎಸ್‌ಎನ್‌ಎ) ಶರಣ ಸಂಗಮ ಸಮಾವೇಶ, ಬಸವ ಜಯಂತಿ ಸಮಾರಂಭ ಹಾಗೂ ಬಸವ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತದಾಚೆಗೆ ಬಸವಣ್ಣನವರ ಜೀವನ ಸಂದೇಶವನ್ನು ಜೀವಂತವಾಗಿಡುವ ಮಹತ್ತರ ಕೆಲಸವನ್ನು ಉತ್ತರ ಅಮೆರಿಕೆಯ ವೀರಶೈವ ಸಮಾಜವು ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ. ಬಸವಾದಿ ಶರಣರು ಸ್ಥಾಪಿಸಿದ ವೀರಶೈವ ಲಿಂಗಾಯತ ಧರ್ಮದ ನಿಜವಾದ ವಾರಸುದಾರರು ನೀವು. ಶರಣರ ವಿಚಾರಗಳು ಎಷ್ಟು ಪ್ರಖರವಾಗಿವೆ ಎಂದರೆ ಅವು ಸಾವಿರಾರು ವರ್ಷಗಳಾದರೂ ಈ ಭೂಮಿಯಿಂದ ಅಳಿಯಲು ಸಾಧ್ಯವಿಲ್ಲ. ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಬಸವಾದಿ ಶಿವ ಶರಣರ ವಚನಗಳು. ಶರಣರು ಕೇವಲ ಧರ್ಮ ಸ್ಥಾಪಕರಲ್ಲ. ಮಾನವ ಧರ್ಮ ಸ್ಥಾಪಕರು. ಸಮಾಜದಲ್ಲಿದ್ದ ಅಜ್ಞಾನವನ್ನು ಕಿತ್ತು ಹಾಕಿದವರು. ಸಮಾಜದಲ್ಲಿ ಸಮ ಸಮಾಜವನ್ನು ಉಂಟು ಮಾಡಿದ ಹರಿಕಾರರು. ಅಂತಹ ಶರಣರು ಕಾಯಕ ದಾಸೋಹ, ಸಮಾನತೆಯ ವಿಚಾರಗಳನ್ನು ಇಂದು ಜಗತ್ತು ಸ್ವೀಕರಿಸಿಕೊಳ್ಳುತ್ತಿರುವುದು ಸಂತೋಷ. ಕಳೆದ ನಾಲ್ವತ್ತೇಳು ವರ್ಷಗಳಿಂದ ಈ ಸಂಘಟನೆಯು ಬಸವಧರ್ಮವನ್ನು ಅಮೆರಿಕೆಯಲ್ಲಿ ಉಳಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿಮಾನವೆನಿಸುತ್ತಿದೆ. ಈ 47ನೇ ಸಮಾವೇಶದ ಮೂಲಕ ದೊಡ್ಡ ಚರಿತ್ರೆಯನ್ನು ನಿರ್ಮಿಸಿದ್ದೀರಿ. ನಿಮ್ಮ ಸೇವೆಗೆ ಪದಗಳು ಇಲ್ಲ. ಈ ಸೇವೆ ಅಮೇರಿಕೆಯಲ್ಲಿ ಸದಾ ಮುಂದುವರೆಯಲಿ ಎಂದು ಡಾ.ಕೋರೆಯವರು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪ್ರವಚನಕಾರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೂಜ್ಯ ವಚನಾನಂದ ಮಹಾಸ್ವಾಮಿಗಳು ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಸಂಸದರಾದ ಜಗದೀಶ ಶೆಟ್ಟರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರುಗಳಾದ ಶ್ರೀ ಪ್ರದೀಪ್, ಕೆ.ಎಸ್.ನವೀನ್, ಉದ್ಯಮಿ ರವಿಶಂಕರ ಭೂಪಳಾಪುರ, ಉತ್ತರ ಅಮೆರಿಕೆ ವೀರಶೈವ ಸಮಾಜದ ಅಧ್ಯಕ್ಷರಾದ ದಯಾನಂದ, ಸಮಾವೇಶದ ಕಾರ್ಯಾಧ್ಯಕ್ಷರಾದ ಮಹೇಶ ಪಾಟೀಲ, ಶೈಲಾ ಬೆಟ್ಟಲೂರ, ಪ್ರಭು ದೇಸಾಯಿಯವರೆ, ಗುರುರಾಜ ಕೋಟಿ ಹಾಗೂ ಸಾವಿರಾರು ವೀರಶೈವ ಲಿಂಗಾಯತ ಸದ್ಭಕ್ತರು ಭಾಗವಹಿಸಿದ್ದರು.