*ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಬಿಡಲು ಸರ್ಕಾರದ ಮಾನದಂಡ ಅಗತ್ಯ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಬಿಡುಗಡೆಗೊಳಿಸಲು ಸರ್ಕಾರದ ಮಾನದಂಡ ಅನುಸರಿಸಿ, ನಿಯಮ ಪಾಲಿಸಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಜಿಪಂ ಸಭಾಗಂಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯುವ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಇಲ್ಲಿಂದ 1 ಟಿಎಂಸಿ ನೀರು ಬಿಡುಗಡೆಗೊಳಿಸುವ ಕುರಿತು ಅಧಿಕಾರಿಗಳು ಈಗಾಗಲೇ ಪತ್ರ ಬರೆದಿದ್ದಾರೆ. ಆದೇಶ ಕೂಡ ಹೊರಡಿಸಿದ್ದಾರೆ ಅದರಂತೆ ನಿಯಮ ಪಾಲಿಸಬೇಕು ಎಂದರು.
ಹಿಡಕಲ್ ಡ್ಯಾಮ್ ನಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸಲು ಆಗುವುದಿಲ್ಲ ಎಂದು ಕಾಮಗಾರಿ ಆರಂಭಕ್ಕೂ ಮುನ್ನ ತಿಳಿಸಿದ್ದೇವು, ಆದರೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸರ್ಕಾರವು ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಆದೇಶಿಸಿದೆ. ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.58 ಟಿಎಂಸಿ ನೀರನ್ನು ಪೂರೈಸಲು ನಿರ್ಧಾರ ಮಾಡಿ ಬಳಿಕ ಕೆಐಡಿಬಿ (KIADB ) ಟೆಂಡರ್ ಆಗಿದೆ ಎಂದು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಆದರೆ ಮುಂದೆ ನೀರು ಬಿಡುಗಡೆ ಮಾಡುವಾಗ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
2018ರಲ್ಲಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಿದ ರಾಯಬಾಗ ತಾಲೂಕಿನ 39 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಶೇ.99 ಮುಗಿದಿದ್ದು, ಈ ಯೋಜನೆಯಿಂದ ರಾಯಬಾಗ ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಚಾಲನೆ ನೀಡಿದ ಪ್ರಮುಖ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರವೇ ಸಿಎಂ ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೇ ಸಿಎಂ ಅವರು ಹುದಲಿ ಮೇಲ್ಸೇತುವೆ, ಡಿಸಿ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿನ ಅಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆಂದು ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಹಿಡಕಲ್ ಜಲಾಶಯದಿಂದ ನಾಳೆಯಿಂದ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಕೃಷ್ಣಾ ನದಿಗೆ ಪ್ರಸ್ತುತ 80 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ದುರ್ಯೋಧನ ಐಹೊಳೆ, ಜಿಪಂ ಸಿಇಓ ರಾಹುಲ್ ಶಿಂಧೆ, ನೀರಾವರಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.