
ಪ್ರಗತಿವಾಹಿನಿ ಸುದ್ದಿ: ಸಾಲ ಕೊಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ನಟೋರಿಯಸ್ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ರೋಹನ್ ಸಾಲ್ಡಾನಾ ಬಂಧಿತ ಆರೋಪಿ. ಉದ್ಯಮಿಗಳೇ ಈತನ ಟಾರ್ಗೆಟ್. ದೊಡ್ಡ ದೊಡ್ಡ ಉದ್ಯಮಿಗಳಿಗೆ ತಾನು ಸಾಲ ಕೊಡುವುದಾಗಿ ಹೇಳಿ ಉದ್ಯಮಿಗಳಿಗೆ ಕೋಟಿ ಕೋಟಿ ವಂಚಿಸುತ್ತಿದ್ದ. ಮಂಗಳೂರಿನ ಜಪ್ಪನ ಮೊಗರು ಬಳಿ ಐಷಾರಾಮಿ ತನ್ನದೇ ಬಂಗಲೆಯಲ್ಲಿ ಆರೋಪಿ ಅರೆಸ್ಟ್ ಆಗಿದ್ದಾನೆ.
ಮನೆಯನ್ನೇ ಪಬ್ ಅನ್ನಾಗಿ, ಐಷಾರಾಮಿ ಲೋಕವನ್ನಾಗಿ ಮಾಡಿಕೊಂಡಿದ್ದ ರೋಹನ್ ಸಾಲ್ಡಾನಾ ಮನೆಯ ಮೊದಲ ಮಹಡಿಯಲ್ಲಿ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದ ಎರಡನೇ ಮಹಡಿಯನ್ನು ಐಷಾರಾಮಿ ಪಬ್, ಬಾರ್ ಅನ್ನಾಗಿ ಮಾಡಿಕೊಂಡು ಅಲ್ಲಿ ತನ್ನ ವ್ಯವಹರಗಳನ್ನು ನಡೆಸುತ್ತಿದ್ದ. ಅದೇ ಪಬ್ ನಲ್ಲಿ ಒಂದು ಸುರಂಗ ಮಾದರಿಯ ಸ್ಲೈಡಿಂಗ್ ರೂಮ್ ಕೂಡ ಇದ್ದು, ತನ್ನಿಂದ ಮೋಸ ಹೋದವರು ಮನೆ ಬಳಿ ಬಂದು ಗಲಾಟೆ ಮಾಡಿದರೆ ಇಲ್ಲದೇ ಪೊಲೀಸರು, ಅಧಿಕಾರಿಗಳು ದಾಳಿ ನಡೆಸಿದರೆ ತಾನು ಊರಿನಲ್ಲಿ ಇಲ್ಲ ಎಂದು ಸುರಂಗದ ರೂಮಿನಲ್ಲಿ ಅಡಗಿಕೊಳ್ಳುತ್ತಿದ್ದ. ಆದರೆ ಆ ರೂಮಿನಲ್ಲಿದ್ದ ಕಿಟಕಿ ಮೂಲಕವಾಗಿ ಮನೆ ಬಳಿ ಯಾರು ಬಂದಿದ್ದಾರೆ, ಹೋಗಿದ್ದಾರೆ ಎಂಬುದನ್ನು ಎಲ್ಲವನ್ನೂ ಗಮನಿಸುತ್ತಿದ್ದ.
ತಡರಾತ್ರಿ ಮಲೇಷಿಯನ್ ಯುವತಿಯರ ಜೊತೆ ಭರ್ಜರಿ ಪಾರ್ಟಿ ಮಾಡುತ್ತಿದ್ದ ವೇಳೆ ಐಷಾರಾಮಿ ಮನೆ ಪಬ್ ಮೇಲೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರೋಹನ್ ಸಾಲ್ಡಾನಾನನ್ನು ಬಂಧಿಸಿದ್ದಾರೆ. ಅಪಾರ ಪ್ರಮಾಣದ ವಸ್ತುಗಳು, ವಿದೇಶಿ ಮದ್ಯಗಳನ್ನು ಜಪ್ತಿ ಮಾಡಿದ್ದಾರೆ. ಉದ್ಯಮಿ ಒಬ್ಬರು ನೀಡಿದ ದೂರುನ ಹಿನ್ನೆಲೆಯಲ್ಲಿ ರೋಹನ್ ನನ್ನು ಬಂಧಿಸಲಾಗಿದೆ.