*ಗುತ್ತಿಗೆದಾರನಿಗೆ ಸಿಗದ ಪರಿಹಾರ: ಡಿಸಿ ಕಾರ್ ಸೀಜ್ ಗೆ ಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 30 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಬ್ಯಾರೆಜ್ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶಿಸಿದರೂ ಹಾನಿಯ ಪರಿಹಾರ ನೀಡದ್ದಕ್ಕೆ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಕಾರು ಕಚೇರಿ ಮುಂಭಾಗದಲ್ಲಿದ್ದಾಗ ವಕೀಲ ಒ.ಬಿ. ಜೋಶಿ ಅವರು ಜಪ್ತಿ ಮಾಡಿ ನ್ಯಾಯಾಲಯದ ಎದುರು ತಂದು ನಿಲ್ಲಿಸಿದ್ದಾರೆ.
1992-93ರಲ್ಲಿ ಚಿಕ್ಕೋಡಿಯ ದೂಧಗಂಗಾ ನದಿಗೆ ಗುತ್ತಿಗೆದಾರ ದಿ. ನಾರಾಯಣ ಗಣೇಶ ಕಾಮತ ಎಂಬವರು ಬ್ಯಾರೆಜ್ ನಿರ್ಮಿಸಿದ್ದರು. ಬ್ಯಾರೆಜ್ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಸಿಮೆಂಟ್ ಪೂರೈಸಲು ಸಣ್ಣ ನೀರಾವರಿ ಇಲಾಖೆ ವಿಳಂಬ ಮಾಡಿತ್ತು. ಇದರಿಂದ ಗುತ್ತಿಗೆದಾರ ಕಾಮತ ಅವರು ಬಹಳಷ್ಟು ಹಾನಿಗೀಡಾಗಿದ್ದರು. ಷರತ್ತುಬದ್ದ ಗುತ್ತಿಗೆಯಲ್ಲಿ ಬಿಲ್ ಸಿಗದಿದ್ದಕ್ಕೆ ನೀರಾವರಿ ಇಲಾಖೆ ವಿರುದ್ಧ 1995ರಲ್ಲಿ ಗುತ್ತಿಗೆದಾರ ಕಾಮತ ನ್ಯಾಯಾಲಯದ ಮೊರೆ ಹೋಗಿದ್ದರು.
ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ, ಗುತ್ತಿಗೆದಾರನಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಬಳಿಕ ಈ ಆದೇಶದ ವಿರುದ್ಧ ಇಲಾಖೆಯವರು ಹೈಕೋರ್ಟ್ ಗೆ ಹೋಗಿದ್ದರು. ನಂತರ ಪ್ರಕರಣ ಮತ್ತೆ ಕೆಳ ಹಂತದ ನ್ಯಾಯಾಲಯಕ್ಕೆ ಬಂದಾಗ, ಗುತ್ತಿಗೆದಾರ ಕಾಮತ್ ಅವರಿಗೆ 11-8-1995ರಿಂದ ಶೇ. 9ರಷ್ಟು ಬಡ್ಡಿ ಸಮೇತ 1.31 ಕೋಟಿ ರೂ. ಪರಿಹಾರ ನೀಡುವಂತೆ 2024 ಜುಲೈ 31ರಂದು ಆದೇಶ ಹೊರಡಿಸಿತ್ತು. ಮೂರನೇ ಬಾರಿಗೆ ಮತ್ತೆ ಇದೇ ವರ್ಷ ಏಪ್ರಿಲ್ ನಲ್ಲಿ ನ್ಯಾಯಾಲಯವು ಈ ಮೊತ್ತದ ಶೇ. 50ರಷ್ಟನ್ನು ಜೂನ್ 2ರೊಳಗೆ ಪಾವತಿಸಿವಂತೆ ಆದೇಶ ನೀಡಿತ್ತು. ಈ ಆದೇಶಕ್ಕೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ನೀರಾವರಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೂಡಲೇ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆ ಎಂದು ನ್ಯಾಯವಾದಿ ಒ.ಬಿ. ಜೋಶಿ ತಿಳಿಸಿದ್ದಾರೆ.