*ಸೇತುವೆಯಿಂದ ಪತ್ನಿ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್: ಅಪ್ರಾಪ್ತೆಯನ್ನು ಮದುವೆಯಾಗಿರುವ ಭೂಪ*

ಪ್ರಗತಿವಾಹಿನಿ ಸುದ್ದಿ: ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಸೇತುವೆಯಿಂದ ಪತ್ನಿ, ಪತಿಯನ್ನೇ ನದಿಗೆ ತಳ್ಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ತನ್ನನ್ನು ನದಿಗೆ ತಳ್ಲಿದಳು ಎಂದು ಆರೋಪಿಸಿದ್ದ ತಾತಪ್ಪ ಎಂಬಾತ ಅಪ್ರಾಪ್ತೆಯನ್ನು ವಿವಾಹವಾಗಿರುವುದು ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾ ಅಧಿಕಾರಿಗಳು ತಾತಪ್ಪ ವಿವಾಹವಾಗಿರುವುದು ಅಪ್ರಾಪ್ತ ಬಾಲಕಿಯನ್ನು ಎಂಬುದನ್ನು ಪತ್ತೆ ಮಾಡಿದ್ದಾರೆ. ೧೫ ವರ್ಷದ ೮ ತಿಂಗಳ ಬಾಲಕಿಯನ್ನು ತಾತಪ್ಪ ವಿವಾಹವಾಗಿದ್ದು, ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಆಕೆ ಅಪ್ರಾಪ್ತೆ ಎಂಬುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ತಾತಪ್ಪ ವಿರುದ್ಧ ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾದಗಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ರಾಯಚೂರು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿರುವ ತಾತಪ್ಪನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೇತುವೆ ಮೇಲಿಂದ ಪತ್ನಿ ತಳ್ಳಿದಳೆಂದು ಆರೋಪಿಸಿ ನದಿಯಿಂದ ಎದ್ದು ಬಂದಿದ್ದ ತಾತಪ್ಪನಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.