*ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 23.8 ಕೆಜಿ ಗಾಂಜಾ ಸೀಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಉದ್ಯಮಭಾಗ ಪೊಲೀಸರು ಭರ್ಜರಿ ಬೇಟೆ ಆಡಿದ್ದು, ಬರೋಬ್ಬರಿ 23.840 ಕೆಜಿ ಗಾಂಜಾ ಸೀಜ್ ಮಾಡಿ, ಮೂರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
ಉದ್ಯಮಭಾಗ ಪೊಲೀಸ್ ಠಾಣೆಯ ಪಿಐ ಡಿ.ಕೆ ಪಾಟೀಲ್, ಪಿಎಸ್ಐ ಕಿರಣ ಹೊನಕಟ್ಟಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ನಗರದಲ್ಲಿ ಗಾಂಜಾ ಘಾಟು ಹತ್ತಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. 6 ಲಕ್ಷ ಮೌಲ್ಯದ 23.840 ಕೆಜಿ ಗಾಂಜಾ ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.
ಉದ್ಯಮಭಾಗದ ಎಕೆಪಿ ಫ್ಯಾಕ್ಟರಿ ಬಳಿ ದಾಳಿ ನಡೆಸಿ ದಿಲೀಪ ದೊಡಮನಿ, ನಖಿಲ್ ಸೋಮಜಿಚೆ, ವೀರೇಶ ಹಿರೇಮಠ ಎಂಬುವವರನ್ನು ಬಂಧಿಸಿದ್ದಾರೆ. ಈ ವೇಳೆ 23.840 ಕೆಜಿ ಗಾಂಜಾ, ಹುಂಡೈ ವರೇನಾ ಕಾರು, ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಉದ್ಯಮಬಾಗ್ ಠಾಣೆ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಶ್ಲಾಘಿಸಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ದೊಡ್ಡ ಕಾರ್ಯಾಚರಣೆ ಎಂದಿದ್ದಾರೆ.
ಈ ವರ್ಷ ಈವರೆಗೆ 40 ಕೆಜಿಗಿಂತ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.