*ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಶಾಸಕ ಪ್ರಭು ಚೌವ್ಹಾಣ್ ಪುತ್ರನ ವಿರುದ್ಧ SPಗೆ ದೂರು ನೀಡಿದ ಸಂತ್ರಸ್ತೆ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರ ಮಹಾರಾಷ್ಟ್ರ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ಅತ್ಯಾಚಾರವೆಸಗಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ನೊಂದ ಯುವತಿ ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಬೀದರ್ ಎಸ್ ಪಿ ಪ್ರದೀಪ್ ಗುಂಟಿಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಪ್ರತೀಕ್ ಚೌವ್ಹಾಣ್ ಗೆ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಎರಡೂ ಕುಟುಂಬದವರು ಸೇರಿ ನೋಡಿ ಅರೇಂಜ್ ಮಾಡಿದ್ದ ಮದುವೆ ನಿಶ್ಚಿತಾರ್ಥವಿದು. ನಿಶ್ಚಿತಾರ್ಥದ ಬಳಿಕ ಪ್ರತೀಕ್ ಚೌವ್ಹಾಣ್ ಯುವತಿಯನ್ನೂ ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಕರೆದೊಯ್ದು ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಅಲ್ಲದೇ ಇಷ್ಟರಲ್ಲೇ ಮದುವೆಯಾಗುತ್ತೇವೆ, ನಿಶ್ಚಿತಾರ್ಥವಾಗಿದೆ ಏನೂ ಆಗಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ. ಆದರೆ ಕೆಲ ದಿನಗಳಿಂದ ಮದುವೆ ಮಾತುಕತೆಗೆ ಪ್ರತೀಕ್ ಕುಟುಂಬ ನಿರಾಕರಿಸಿದೆ. ಮಾತುಕತೆಗೆಂದು ಮನೆಗೆ ಬಂದ ಯುವತಿ ಕುಟುಂಬದವರ ಮೇಲೆಯೇ ಹಲ್ಲೆ ನಡೆಸಿ ಕಳುಹಿಸಿದ್ದಾರೆ. ಶಾಸಕನ ಕುಟುಂಬದ ವರ್ತನೆ, ಪುತ್ರನ ಕೃತ್ಯಕ್ಕೆ ನೊಂದ ಸಂತ್ರಸ್ತ ಯುವತಿ ಈ ಹಿಂದೆಯೇ ಮಹಿಳೆ ಆಯೋಗಕ್ಕೆ ದೂರು ನೀಡಿದ್ದರು. ಇಂದು ಬೀದರ್ ಎಸ್ ಪಿಗೆ ಪ್ರತೀಕ್ ಚೌವ್ಹಾಣ್ ವಿರುದ್ಧ ದೂರು ನೀಡಿದ್ದಾರೆ.