
ಕೇಂದ್ರದ ಮಾಜಿ ಸಚಿವರ ವಿರುದ್ಧ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ಅತ್ಯಾಚಾರವೆಸಗಿ ಕೈ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ರಾಜ್ಯ ಮಹಿಳಾ ಆಯೋಗಕ್ಕೆ ಹಾಗೂ ಎಸ್ ಪಿಗೆ ದೂರು ನೀಡಿದ್ದಾರೆ. ಈ ಘಟನೆ ಬೆನ್ನಲ್ಲೇ ಶಾಸಕ ಪ್ರಭು ಚೌವ್ಹಾಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಿಶ್ಚಿತಾರ್ಥದ ಬಳಿಕ ಯುವತಿ ಮೊಬೈಲ್ ನಲ್ಲಿ ಚಾಟಿಂಗ್, ವಿಡಿಯೋ ಕಾಲ್ ನಲ್ಲಿ ಇರುತ್ತಿದ್ದಳು. ಬೇರೆಯವರೊಂದಿಗೆ ಮಾತನಾಡುತ್ತಿದಳು, ಯುವತಿ ಏನೋ ತಪ್ಪಾಗಿ ನಡೆದುಕೊಳ್ಳುತ್ತಿದ್ದಾಳೆ. ಆಕೆಯೂ ನನ್ನ ಮಗಳಂತೆ ಅಂದುಕೊಂಡು ಕರೆದು ಬುದ್ಧಿ ಹೇಳಿದ್ದೆ. ನನ್ನ ಮಗ ಮದುವೆ ಆಗಲ್ಲ ಎಂದಿದ್ದಾನೆ. ಆತ ಯಾವುದೇ ಉಲ್ಟಾ ಪಲ್ಟಾ ಕೆಲಸ ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಒಂದು ಗ್ಯಾಂಗ್ ಷಡ್ಯಂತ್ರ ನಡೆಸುತ್ತಿದೆ. ಅದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಗ್ಯಾಂಗ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈಗ ಯುವತಿ ದೂರು ನೀಡುವಷ್ಟರ ಮಟ್ಟಿಗೆ ಹೋಗಿದ್ದಾಳೆ ಎಂದರೆ ಇದರ ಹಿಂದೆ ಇರುವುದು ಅದೇ ಗ್ಯಾಂಗ್. ಆ ಯುವತಿಯನ್ನು ಕರೆದೊಯ್ದು ದೂರು ಕೊಡಿಸಿದ್ದಾರೆ. ನನ್ನ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ೨೦೧೪ರಿಂದಲೂ ನನ್ನ ವಿರುದ್ಧ ಭಗವಂತ ಖೂಬಾ ಗ್ಯಾಂಗ್ ಕೆಲಸ ಮಾಡುತ್ತಿದೆ. ಈಗ ನನ್ನ ಕುಟುಂಬದ ಹೆಸರು ಕೆಡಿಸಲು ಮುಂದಾಗಿದ್ದಾರೆ. ಇನ್ನೂ ಸುಮ್ಮನಿರಬೇಕಾ? ಎಂದು ಕಿಡಿಕಾರಿದ್ದಾರೆ.
ನನ್ನ ಮಗ, ಸೊಸೆ, ಅವರ ಸಹೋದರಿ ಶಿರಡಿಗೆ ಹೋಗಿದ್ದರು. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡುವವನಲ್ಲ. ನನ್ನ ಮಗ ನೆಪ ಮಾತ್ರ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.