
ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತಂದ ಜಿಎಸ್ಟಿ ಯಿಂದ ಸಣ್ಣ ವ್ಯಾಪಾರಿಗಳು, ಬಡವರಿಗೆ ತೊಂದರೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: “ಕೇಂದ್ರ ಬಿಜೆಪಿ ಸರ್ಕಾರ ಜಿಎಸ್ ಟಿ ನೋಟಿಸ್ ನೀಡುವ ಮೂಲಕ ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳು, ಬಡವರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಹೊಸಕೋಟೆಯಲ್ಲಿ ಭಾನುವಾರ ನಡೆದ ಇ-ಸ್ವತ್ತು ಹಂಚಿಕೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
“40 ಲಕ್ಷ ರೂ. ಮೇಲೆ ವಹಿವಾಟು ಮಾಡಿದವರಿಗೆ, ತರಕಾರಿ, ಎಳನೀರು ವ್ಯಾಪಾರ ಮಾಡುತ್ತಿದ್ದವರಿಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 450 ರೂ. ಇದ್ದ ಅಡುಗೆ ಸಿಲಿಂಡರ್ ಬೆಲೆ ಈಗ 1 ಸಾವಿರ ಮುಟ್ಟಿದೆ. ಇದೇ ಕೇಂದ್ರದ ಸಾಧನೆ” ಎಂದರು.
“ಕಳೆದ ಎರಡು ವರ್ಷಗಳಿಂದ ನಾವು ಅನುದಾನಕ್ಕಾಗಿ ಅರ್ಜಿಗಳನ್ನು ನೀಡಿದ್ದೇ, ನೀಡಿದ್ದು. ಆದರೆ ಒಬ್ಬನೇ ಒಬ್ಬ ಬಿಜೆಪಿ ಸಂಸದ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರಿಗೆ ರಾಜ್ಯದ ಬಡ ಜನರ ಬಗ್ಗೆ ಕಾಳಜಿಯಿಲ್ಲ, ಹತ್ತು ರೂಪಾಯಿ ಬಿಚ್ಚುತ್ತಿಲ್ಲ. ಕರ್ನಾಟಕದವರು ಕೇಂದ್ರಕ್ಕೆ 100 ರೂಪಾಯಿ ಕೊಟ್ಟರೆ ನಮಗೆ ಮರಳಿ ಬರುತ್ತಿರುವುದು ಕೇವಲ 13 ರೂಪಾಯಿ ಮಾತ್ರ ಎಂದು ತರಾಟೆಗೆ ತೆಗೆದುಕೊಂಡರು.
“ನೀವು ಯಾರೂ ಸಹ ಗಾಬರಿಯಾಗಬೇಡಿ. ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ನಿಮ್ಮ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.
“ಈ ಭಾಗಕ್ಕೆ 2027 ರ ಒಳಗೆ ಎತ್ತಿನಹೊಳೆ ನೀರು ನೀಡಬೇಕು ಎಂದು ನಾವು ಶಪಥ ಮಾಡಿದ್ದೇವೆ. ಬೆಂಗಳೂರು ಉತ್ತರ ಭಾಗಕ್ಕೆ ನೀರು ಹರಿಸುವ ಕೆಲಸ ನಾವು ಮಾಡಿಯೇ ಸಿದ್ದ. ಇಲ್ಲಿನ ಅಂತರ್ಜಲ ಹೆಚ್ಚಳ ಮಾಡಿ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂಬುದು ನಮ್ಮ ಕನಸು. ಈ ಕೆಲಸವನ್ನು ಬಿಜೆಪಿಯವರು, ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿದ್ದರೇ? ಇದೆಲ್ಲವೂ ಮೋದಿ ಅವರ ಕಾಲದಲ್ಲಿ ಆಗಿತ್ತೇ? ಇದೆಲ್ಲವೂ ಕಾಂಗ್ರೆಸ್ ಕೊಡುಗೆ” ಎಂದರು.
“ಹೊಸಕೋಟೆ ಭಾಗಕ್ಕೆ ಮೆಟ್ರೋ ಮಾರ್ಗ ತರಲು ಈಗಾಗಲೇ ಡಿಪಿಆರ್ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಅವಧಿಯೊಳಗೆ ಮೆಟ್ರೋ ಮಂಜೂರು ಕೆಲಸ ಮಾಡುತ್ತೇನೆ” ಎಂದು ಹೇಳಿದರು.
“ನಮ್ಮ ಕಾಲದಲ್ಲಿ ನಾವು ಏನು ಕೆಲಸ ಮಾಡಿದ್ದೇವೆ, ನೀವು ಏನು ಮಾಡಿದ್ದೀರಿ ಎಂದು ಸದನದಲ್ಲಿ ಮಾತನಾಡೋಣ ಬನ್ನಿ ಎಂದು ವಿಪಕ್ಷಗಳಿಗೆ ಆಹ್ವಾನ ನೀಡುತ್ತೇನೆ. ಎತ್ತಿನಹೊಳೆಯಿಂದ ನೀರು ತೆಗೆಯಲು ಆಗುವುದೇ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ಆದರೆ ಈಗ 40 ಮೀ. ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಇದು ದೇಶದ ಮಾದರಿ ಯೋಜನೆ. ಕಳೆದ ವಾರ ದೊಡ್ಡಬಳ್ಳಾಪುರ, ಕೊರಟಗೆರೆಗೆ ತೆರಳಿ ಯೋಜನೆ ಪ್ರಗತಿ ನೋಡಿಕೊಂಡು ಬಂದೆ” ಎಂದರು.
“ಈ ಭಾಗದ ಆಸ್ತಿಗಳೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನ ಆಸ್ತಿಗಳಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಈ ಭಾಗದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇವೆ. ನಿಮ್ಮ ಊರಿನ ಅಳಿಯನನ್ನೇ ಎಂಡಿಯನ್ನಾಗಿ ನೇಮಕ ಮಾಡಿದ್ದೇವೆ. ಅವರ ಬಳಿ ಪೇಪರ್ ಇದೆ, ನನ್ನ ಬಳಿ ಪೆನ್ನಿದೆ ಎಂದರು.
“ಹುಟ್ಟಿದಾಗ ಭೂಮಿ ಮೇಲಿರುತ್ತೇವೆ. ಸತ್ತಾಗ ಭೂಮಿ ಕೆಳಗಿರುತ್ತೇವೆ. ಆದರೆ ಸಾಧನೆಗಳು ನಮ್ಮ ಮೇಲಿರುತ್ತವೆ. ಕೆಂಗಲ್ ಹನುಮಂತಯ್ಯ ಅವರು, ದೇವರಾಜ ಅರಸು ಅವರು ಸಿದ್ದರಾಮಯ್ಯ ಅವರನ್ನು ಅವರ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತೇವೆ. 19 ಸಾವಿರ ಕೋಟಿಯಷ್ಟು ಸಬ್ಸಿಡಿಯನ್ನು ರೈತರ ಪಂಪ್ ಸೆಟ್ ವಿದ್ಯುತ್ ಗೆ ನೀಡುತ್ತಿದ್ದೇವೆ. ಸಮಾಜ ಹಾಗೂ ಜನರ ಕಲ್ಯಾಣಕ್ಕೆಂದೇ 1 ಲಕ್ಷ ಕೋಟಿ ಹಣವನ್ನು ನೀಡುತ್ತಿದ್ದೇವೆ” ಎಂದು ತಿಳಿಸಿದರು.
“ಕೃಷ್ಣ ಬೈರೇಗೌಡರು, ಪ್ರಿಯಾಂಕ್ ಖರ್ಗೆ ಅವರು ಹಟ್ಟಿ, ತಾಂಡದಲ್ಲಿನ ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಒಂದು ಕೋಟಿಗೂ ಹೆಚ್ಚು ಜನರಿಗೆ ಪಟ್ಟಾ ಖಾತೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಬಿ ಖಾತೆಗಳನ್ನು ಎ ಖಾತೆಗಳನ್ನಾಗಿ ಬದಲಾವಣೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ” ಎಂದರು.
“ದೇಶದ ಯಾವ, ಯಾವ ರಾಜ್ಯದಲ್ಲಿ ಚುನಾವಣೆ ಬರುತ್ತದೆಯೋ ಅಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಕಲು ಮಾಡಿ ಘೋಷಣೆ ಮಾಡುವುದೇ ಬಿಜೆಪಿ ಕೆಲಸವಾಗಿದೆ. ಬಿಹಾರ,ದೆಹಲಿ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನೇಕ ಕಡೆ ಗ್ಯಾರಂಟಿ ಯೋಜನೆಗಳನ್ನು ನಮ್ಮನ್ನು ನೋಡಿಕೊಂಡು ಜಾರಿಗೆ ತಂದಿದ್ದಾರೆ. ವಿರೋಧ ಮಾಡಿದವರೇ ನಮ್ಮನ್ನು ಅನುಸರಿಸುತ್ತಿದ್ದಾರೆ” ಎಂದರು.
“ಮಲ್ಲಿಕಾರ್ಜುನ ಖರ್ಗೆ ಅವರು ಅವರ ಕ್ಷೇತ್ರದಲ್ಲಿ ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಿದ್ದಾರೆ. 371 ಜೆ ಮೂಲಕ ಕ್ರಾಂತಿ ಮಾಡಿದ್ದಾರೆ. ಇತ್ತೀಚೆಗೆ 1 ಸಾವಿರ ಕೋಟಿಯನ್ನು ರಸ್ತೆ ಅಭಿವೃದ್ಧಿಗೆ ನೀಡಲಾಯಿತು” ಎಂದರು.
“ಐದು ಗ್ಯಾರಂಟಿಗಳು ಸೇರಿ ಅನೇಕ ಯೋಜನೆಗಳು ಒಂದೇ ಒಂದು ರೂಪಾಯಿ ಲಂಚ ಇಲ್ಲದೇ ಜಾರಿಗೆ ಬಂದಿದೆ. ಇಂತಹ ಪರಿಶುದ್ದ ಆಡಳಿತವನ್ನು ನಾವು ನೀಡುತ್ತಿದ್ದೇವೆ. ಬಿಜೆಪಿಯವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡುತ್ತೇವೆ ಎಂದು ಪ್ರಧಾನಿ ಅವರಿಂದ ಬಜೆಟ್ ಅಲ್ಲಿ ಘೋಷಣೆ ಮಾಡಿದರು. ಅವರದ್ದು ಬರೀ ಖಾಲಿ ಮಾತು” ಎಂದರು.
“ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿ ಇರುವ ಕಾರಣಕ್ಕೆ ನಾವು ಅನೇಕ ಯೋಜನೆಗಳ ಮೂಲಕ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ಹೊಸಕೋಟೆ ಭಾಗದಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆ ಮೂಲಕ ರೈತರ ಬೆಂಬಲಕ್ಕೆ ನಿಂತಿತ್ತು. 5 ರೂಪಾಯಿ ಸಹಾಯಧನ ನೀಡುವ ಮೂಲಕ ನಿಮಗೆ ನೆರವಾಗಿದ್ದು ನಾವು” ಎಂದರು.
“ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುವಾಗ ವಯಸ್ಸಾದ ಮಹಿಳೆ ಸೌತೆಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇನೆ ಎಂದರು. ಉಳುವವನಿಗೆ ಭೂಮಿ ಕಾರ್ಯಕ್ರಮ ನೀಡಿದ್ದು ದೇವರಾಜ ಅರಸು ಕಾಲದಲ್ಲಿ ನಮ್ಮ ಸರ್ಕಾರ. ಉಳುವವನಿಗೆ ಭೂಮಿ, ಪಿಂಚಣಿ ಎಲ್ಲವೂ ನಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿ ಅಥವಾ ಜೆಡಿಎಸ್ ಕೊಟ್ಟಿದೆಯೇ?” ಎಂದು ಸವಾಲೆಸೆದರು.
“ಶರತ್ ಬಚ್ಚೇಗೌಡರು, ಮುನಿಯಪ್ಪನವರು, ಶ್ರೀನಿವಾಸ್ ಅವರನ್ನು ಗ್ರಾಮಾಂತರದ ಜನರು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದೀರಿ. ಉಪಚುನಾವಣೆಯಲ್ಲಿ ಮೂರು ಜನರನ್ನು ಗೆಲ್ಲಿಸಿ 140 ಶಾಸಕರ ಬಲವನ್ನು ನಮಗೆ ನೀಡಿರುವ ನಿಮ್ಮ ಸೇವೆಗೆ ನಾವು ಸನ್ನದ್ದರಾಗಿದ್ದೇವೆ. ಉಪಚುನಾವಣೆಯಲ್ಲಿ ಹಳೇ ಗಿರಾಕಿಗಳು ಬೇಡ ಎಂದು ಬದಲಾವಣೆಗೆ ನಾಂದಿ ಹಾಡಿದವರು ಕರ್ನಾಟಕದ ಜನರು” ಎಂದು ಹೇಳಿದರು.
“ಉಪಕಾರ ಎನ್ನುವುದು ಪುಸ್ತಕದಲ್ಲಿ ಇರುವುದಿಲ್ಲ, ಮಾಡುವ ಮನಸ್ಸಿನಲ್ಲಿರುತ್ತದೆ. ಈ ಭಾಗದ ಒಬ್ಬ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದ. ಹೋದವನನ್ನು ಎಂಎಲ್ ಸಿ ಮಾಡಿದರು. ಆದರೆ ಒಂದೇ ಒಂದು ದಿನ ಜನರ ಕಷ್ಟ ಸುಖ ಕೇಳುತ್ತಿಲ್ಲ. ಇವತ್ತು ವೇದಿಕೆಗೆ ಬಂದು ನಮ್ಮ ತಪ್ಪು ಒಪ್ಪುಗಳನ್ನು ಹೇಳಬೇಕಿತ್ತು. ಆದರೆ ಆತನಿಗೆ ಧಮ್ ಇಲ್ಲ, ಶಕ್ತಿ, ಧೈರ್ಯವಿಲ್ಲ” ಎಂದು ಲೇವಡಿ ಮಾಡಿದರು.