*ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡ ರಮೇಶ್ ಕತ್ತಿ ಹಾಗೂ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ದಿನದ ಹಿಂದಷ್ಟೇ ಹುಕ್ಕೇರಿ ತಾಲೂಕಿನಲ್ಲಿ ಹೊರಗಿನವರಿಗೆ ಆಡಳಿತ ನಡೆಸುವ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದರು. ರಮೇಶ ಕತ್ತಿ ಹೇಳಿಕೆಯ ಮರು ದಿನವೇ ಸಮಯ ಬಂದಾಗ ರಮೇಶ ಹೇಳಿಕೆಗೆ ಉತ್ತರ ಕೊಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೇ ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹಾರೂಗೇರಿ ಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ 103ನೇ ತ್ರೈವಾರ್ಷಿಕ ಜೈನ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ರಮೇಶ ಕತ್ತಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಅವರ ಮಧ್ಯೆ ಇದ್ದ ವೈಮನಸ್ಸು ಮರೆತು ಇಂದು ಹಾರೂಗೇರಿ ಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ 103ನೇ ತ್ರೈವಾರ್ಷಿಕ ಜೈನ ಸಮಾವೇಶದಲ್ಲಿ ಪಾಲ್ಗೊಂಡ ಇಬ್ಬರು ನಾಯಕರು ಅಕ್ಕಪಕ್ಕ ಕುಳಿತು ಚರ್ಚೆ ನಡೆಸುತ್ತಿರುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.