ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವಿಷಯ ಬಿಟ್ಟರೆ ಡಿ.ಕೆ.ಶಿವಕುಮಾರ ನನ್ನ ಆತ್ಮೀಯ ಸ್ನೇಹಿತ. ನಂಬರ್ 1 ಸ್ನೇಹಿತ ಅವರು ಎಂದು ಹೇಳು ಮೂಲಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅಚ್ಛರಿ ಮೂಡಿಸಿದ್ದಾರೆ.
ಗೋಕಾಕದಲ್ಲಿ ಮತದಾನದ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ನನ್ನ ವಿರುದ್ಧ ಪ್ರಚಾರಕ್ಕೆ ಬರುವುದಿಲ್ಲ ಎಂದು ಮೊದಲೇ ಗೊತ್ತಿತ್ತು. ಅವರ ಇಬ್ಬರು ಸ್ನೇಹಿತರು ನಾಮಪತ್ರ ಸಲ್ಲಿಸುವ ವೇಳೆ ಬಂದಿದ್ದರು. ಆಗಲೇ ನನಗೆ ಗೊತ್ತಾಗಿದೆ. ಬೆಳಗಾವಿ ವಿಷಯ ಬಿಟ್ಟರೆ ಶಿವಕುಮಾರ ನನ್ನ ಆತ್ಮೀಯ ಸ್ನೇಹಿತ. ನಂಬರ್ 1 ಮಿತ್ರ ಎಂದು ಹೇಳಿದರು.
ದಿನೇಶ ಗುಂಡೂರಾವ್ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಲು ಅರ್ಹನಲ್ಲ. ಅಂತವನನ್ನು ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಿದ್ದು ದುರ್ಧೈವ. ವೇಣುಗೋಪಾಲ ಸೆಕೆಂಡ್ ದಿನೇಶ್ ಗುಂಡೂರಾವ್ ಎಂದು ಕಿಡಿಕಾರಿದರು.
224 ಕ್ಷೇತ್ರಕ್ಕಿಂತ 15 ಕ್ಷೇತ್ರ ಮಹತ್ವ. 15ರಲ್ಲಿ ಒಂದು ಕ್ಷೇತ್ರ ಮಾತ್ರ ಕಷ್ಟವಿದೆ. ಉಳಿದೆಲ್ಲ ಉತ್ತಮವಾಗಿದೆ. ಯಾರಾದರೂ ಸೋತರೆ ಅವರನ್ನು ಎಂಎಲ್ ಸಿ ಮಾಡಲಾಗುತ್ತದೆ ಎಂದೂ ರಮೇಶ್ ಹೇಳಿದರು.
ಸಿದ್ದರಾಮಯ್ಯ ನನ್ನ ವಿರುದ್ಧ ಮಾತನಾಡಿಲ್ಲ, ಹಾಗಾಗಿ ನಾನು ನಾಳೆ ಮಾಡಬೇಕೆಂದಿದ್ದ ಪತ್ರಿಕಾಗೋಷ್ಠಿಯನ್ನು ರದ್ಧುಪಡಿಸಿದ್ದೇನೆ. ಅವರು ನನ್ನ ವಿರುದ್ಧ ಮಾತನಾಡಿದ್ದರೆ ಹೇಳಬೇಕೆಂದಿದ್ದನ್ನೆಲ್ಲ ಹೇಳುತ್ತಿದ್ದೆ. ನಾನು ಹೇಳಬೇಕಾದದ್ದನ್ನು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ನನ್ನನ್ನು ತುಳಿಯಲು ಪ್ರಯತ್ನಿಸಿದಾಗಲೆಲ್ಲ ನಾನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದೇನೆ. ಶಾಲೆಗೆ ಹೋಗುವ ಸಂದರ್ಭದಲ್ಲೂ ನನ್ನನ್ನು ಮನೆಯಿಂದ ಹೊರಹಾಕಿಸಿದ್ದ. ಆಗಿನಿಂದಲೂ ನಾನು ಬೆಳೆಯುತ್ತಿದ್ದೇನೆ. ಹಾಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಲಖನ್ ಜಾರಕಿಹೊಳಿ ಸ್ವಭಾವ ಗೊತ್ತಿರಲಿಲ್ಲ. ಅವನು ಇಡೀ ಗೋಕಾಕದಲ್ಲಿ ಎಲ್ಲ ಕುಟುಂಬದಲ್ಲಿ ಜಗಳ ಹಚ್ಚುತ್ತ ಬಂದಿದ್ದಾನಂತೆ. ಈಗ ಗೊತ್ತಾಗಿದೆ. ಇನ್ನು ಮುಂದೆ ಅವನ ನೆರಳನ್ನು ಸಹ ಬೀಳಿಸಿಕೊಳ್ಳುವುದಿಲ್ಲ. ಅವನು ಹರಾಮಿ ದುಡ್ಡು ಖರ್ಚು ಮಾಡಲು ಚುನಾವಣೆಗೆ ನಿಂತಿದ್ದಾನೆ. ಸತೀಶ್ ಮೊದಲಿನಿಂದಲೂ ನನ್ನನ್ನು ತುಳಿಯುತ್ತ ಬಂದಿದ್ದಾನೆ. ಹಾಗಾಗಿ ಅದು ಬೇಸರ ಎನಿಸುವುದಿಲ್ಲ. ಆದರೆ ಲಖನ್ ನನ್ನು ನಾನು ಬಹಳ ನಂಬಿದ್ದೆ ಎಂದು ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ