*ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕೇವಲ ಅಂಕಗಳಿಕೆಗಷ್ಟೇ ಸೀಮಿತವಾಗಬಾರದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ
ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಯಂತ್ರಗಳಾಗುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಸಾಹಿತ್ಯಾಸಕ್ತರನ್ನಾಗಿ ಬೆಳೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ-2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಸಮ್ಮೇಳನ ಮಕ್ಕಳಲ್ಲಿ ಮತ್ತು ಮಕ್ಕಳ ಸಾಹಿತಿಗಳಲ್ಲಿ ಹೊಸ ಉತ್ಸಾಹ, ಚೈತನ್ಯ ತುಂಬಲಿ ಎಂದು ಹಾರೈಸಿದರು.
ಮಕ್ಕಳ ಅಭಿವೃದ್ಧಿಗಾಗಿ ನನ್ನ ಇಲಾಖೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಮುಂದಿನ ಸಮ್ಮೇಳನಕ್ಕೆ ನನ್ನ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡುತ್ತೇನೆ. ಇದು ಕೇವಲ ಮಕ್ಕಳ ಸಾಹಿತಿ, ಹಿರಿಯ ಸಾಹಿತಿಗಳಿಗೆ ಸೀಮಿತವಾಗದೇ, ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬ ಶಾಲಾ ಮಕ್ಕಳಿಗೂ ತಲುಪುವಂತಾಗಬೇಕು ಎಂದರು.

ಮಕ್ಕಳಲ್ಲಿಯೇ ನಮ್ಮ ಅಚಾರ, ವಿಚಾರಗಳು ಹೆಚ್ಚಾಗಬೇಕು, ಜೊತೆಗೆ ಮತ್ತೊಬ್ಬರಿಗೆ ಮುಟ್ಟಬೇಕು. ನಾಡಿನಲ್ಲಿ ಮಕ್ಕಳ ಪ್ರತಿಭೆಗೆ ಕೊರತೆಯಿಲ್ಲ. ಮಕ್ಕಳು ಸಾಹಿತ್ಯಾಭಿರುಚಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ನಾಡಿನ ಹೆಮ್ಮೆಯ ಸಾಹಿತಿಗಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.
ಪಕ್ಕದ ಮನೆಯ ಮಕ್ಕಳಿಗೆ ಹೋಲಿಸಿ ಅಂಕಗಳಿಕೆಗೆ ಸೀಮಿತಗೊಳಿಸದೆ, ಸಾಹಿತ್ಯ ಓದಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಾಹಿತ್ಯದ ಅಭಿರುಚಿ ತೋರಿಸಲು ಆಯೋಜಿಸಿರುವ ಇಂಥ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಚಿವರು ಹೇಳಿದರು.
ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದು ಉತ್ತಮ ಅಚಾರ ವಿಚಾರಗಳನ್ನು ಬೆಳೆಸಿಕೊಂಡರೆ ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯರು, ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಚ.ನಂ.ಅಶೋಕ, ಎಂ.ವಾಯ್.ಮೆನಸಿನಕಾಯಿ, ಅಮೂಲ್ಯ ಪಾಟೀಲ, ಬಸವರಾಜ ಗಾರ್ಗಿ, ಲಕ್ಷ್ಮೀ ಪಾಟೀಲ, ಎಂ.ಎಂ.ಸಂಗಣ್ಣವರ, ಸಿದ್ರಾಮ ನಿಲಜಗಿ, ಪ್ರಕಾಶ ಹೊಸಮನಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.