*ಡಬಲ್ ಇಂಜಿನ್ ಆಡಳಿತ ಮಾಡಿದ ಬಿಜೆಪಿ ಕೊಡುಗೆ ಏನು? ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: “ಜನರ ಋಣ ತೀರಿಸಬೇಕು ಎಂಬ ಕಾರಣಕ್ಕೆ ಶಾಸಕ ಶಿವಲಿಂಗೇಗೌಡರು ಸಿಎಂ ಹಾಗೂ ನನ್ನ ಬೆನ್ನು ಬಿದ್ದು, ಕನಕಪುರ ಹಾಗೂ ವರುಣಾ ಕ್ಷೇತ್ರಗಳಿಗಿಂತ ಹೆಚ್ಚು ಕೆಲಸವನ್ನು ಅರಸೀಕೆರೆಯಲ್ಲಿ ಮಾಡಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಸೀಕೆರೆಯಲ್ಲಿ ನಡೆದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಇಂದು ಅರಸೀಕೆರೆ ತಾಲೂಕಿಗೆ ಐತಿಹಾಸಿಕ ದಿನ. ನಾವು ಹಾಗೂ ಮುಖ್ಯಮಂತ್ರಿಗಳು ಈ ಕ್ಷೇತ್ರಕ್ಕೆ ಸುಮ್ಮನೆ ಬಂದಿಲ್ಲ. ರಾಜ್ಯದಲ್ಲಿ 136 ಶಾಸಕರ ಬಲದ ಸರ್ಕಾರ ರಚಿಸಲು ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹಕಾರಿಯಾದ ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ನಮಗೆ ಶಿವಲಿಂಗೇಗೌಡರ ಕಾಟ ಹೆಚ್ಚಾಗಿದೆ. ಅವರು ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನೆ ಸುತ್ತಲು ನಾಲ್ಕು ಜೊತೆ ಚಪ್ಪಲಿ ಸವೆಸಿರಬಹುದು. ಅವರು ಪ್ರತಿ ಬಾರಿ ಬಂದಾಗಲೂ ನಾನು ಕ್ಷೇತ್ರದ ಜನರ ಋಣ ತೀರಿಸಬೇಕು. ಈ ಯೋಜನೆಗಳಿಗಾಗಿ ನಾನು ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನೀವು ನೆರವು ನೀಡಲೇಬೇಕು ಎಂದು ನಮ್ಮ ಬೆನ್ನು ಬಿದ್ದಿದ್ದಾರೆ” ಎಂದು ತಿಳಿಸಿದರು.
“ಕನಕಪುರ ಹಾಗೂ ವರುಣಾ ಕ್ಷೇತ್ರಕ್ಕಿಂತ ಹೆಚ್ಚು ಕೆಲಸಗಳನ್ನು ಅರಸೀಕೆರೆ ಕ್ಷೇತ್ರದಲ್ಲಿ ಶಿವಲಿಂಗೇಗೌಡರು ಮಾಡಿಸಿದ್ದಾರೆ. ನಮ್ಮ ತಾಲೂಕಿನಲ್ಲಿ ಡಿಪ್ಲಮೋ, ಇಂಜಿನಿಯರಿಂಗ್ ಕಾಲೇಜು ಇಲ್ಲ. ನಮ್ಮ ಊರಿಗೆ ನೀರಿಲ್ಲ. ಆದರೆ ಹೇಮಾವತಿ, ಎತ್ತಿನಹೊಳೆ ನೀರು ನಮಗೆ ಬೇಕು ಎಂದು ಹೋರಾಟ ಮಾಡಿ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಇಂದು ನಿಮ್ಮ ಮುಂದೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
“ನಾವು ನಮ್ಮ ಜೀವನದಲ್ಲಿ ನಾಲ್ಕು ಋಣಗಳನ್ನು ತೀರಿಸಬೇಕು ತಂದೆತಾಯಿ ಋಣ, ದೇವರ ಋಣ, ಗುರುವಿನ ಋಣ, ಸಮಾಜದ ಋಣ ತೀರಿಸಬೇಕು. ಈ ಋಣಗಳನ್ನು ಧರ್ಮದಿಂದಲೇ ತೀರಿಸಬೇಕು ಎಂದು ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ ಹೇಳುತ್ತಾನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಜಾರಿಗೆ ತಂದು ಹೇಗೆ ಮಲ್ಲಿಕಾರ್ಜುನ ಖರ್ಗೆ ಅವರು ಆ ಭಾಗದ ಜನರ ಋಣ ತೀರಿಸಿದರೋ ಅದೇ ರೀತಿ ಶಿವಲಿಂಗೇಗೌಡರು ನಿಮ್ಮೆಲ್ಲರ ಋಣ ತೀರಿಸಿದ್ದಾರೆ. ರಾಜ್ಯದಲ್ಲಿ ಮಲತಾಯಿ ಧೋರಣೆಗೆ ಒಳಗಾಗಿದ್ದ ಅರಸೀಕೆರೆ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಇಂತಹ ಶಾಸಕರು ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಇದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಮತ್ತಷ್ಟು ಹೆಚ್ಚಿನ ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಯೋಗಿ ಎಂದು ಕರೆಸಿಕೊಳ್ಳುವ ಮುನ್ನ ನಾವು ಉಪಯೋಗಿ ಎಂದು ಕರೆಸಿಕೊಳ್ಳಬೇಕು. ಜನರ ಪ್ರೀತಿ ವಿಶ್ವಾಸ ಮರದಲ್ಲಿ, ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ನಾವು ಕೆಲಸ ಮಾಡುವ ಮೂಲಕ ಜನರ ಮನದಲ್ಲಿ ಪ್ರೀತಿ ವಿಶ್ವಾಸ ಗಳಿಸಬೇಕು. ಇಲ್ಲಿನ ಕೆರೆಗಳು ತುಂಬಬೇಕು, ನೀರಾವರಿ ಯೋಜನೆಗಳು ಜಾರಿಯಾಗಿ ರೈತನ ಬದುಕು ಹಸನ ಮಾಡಬೇಕು. ರೈತರಿಗೆ ಸಂಬಳ, ವೇತನ, ಪಿಂಚಣಿ, ಲಂಚ ಯಾವುದೂ ಇಲ್ಲ. ಹೀಗಾಗಿ ರೈತರಿಗೆ ಸಹಾಯ ಮಾಡಲೇಬೇಕು ಎಂದು ಶಿವಲಿಂಗೇಗೌಡರು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ಈ ಎಲ್ಲಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿಸಿದ್ದಾರೆ” ಎಂದರು.
ನಿಮ್ಮ ನಂಬಿಕೆ ಉಳಿಸಿಕೊಂಡು ಮುಂದೆ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ:
ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಅದೇ ರೀತಿ ನಿಮಗೂ ನಿಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಚುನಾವಣೆಯಲ್ಲಿ ನೀವು ಅದನ್ನು ಸಾಬೀತುಪಡಿಸಿ ರಾಜ್ಯಕ್ಕೆ ದೊಡ್ಡ ಸಂದೇಶ ರವಾನಿಸಿದ್ದೀರಿ. ಈ ಬಾರಿ ಜಿಲ್ಲೆಯಲ್ಲಿ ಅವರೊಬ್ಬರು ಮಾತ್ರ ಗೆದ್ದಿರಬಹುದು. ಮುಂದೆ 2028ರಲ್ಲಿ ಈ ಜಿಲ್ಲೆಯ 7ಕ್ಕೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಆತ್ಮವಿಶ್ವಾಸ ನನಗಿದೆ. ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇರೀತಿ ಶಿವಲಿಂಗೇಗೌಡರು ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ” ಎಂದರು.
“ದೇವರು ನಮಗೆ ಎರಡು ಆಯ್ಕೆ ಕೊಡುತ್ತಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದಿಲ್ಲಿ. ಭೂಮಿಯ ಮೇಲೆ ಯಾರೂ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸ ಬಹಳ ಮುಖ್ಯ. ನಿಮ್ಮ ಜಮೀನಿಗೆ ನೀರು ಕೊಟ್ಟು, ಬದುಕು, ಕುಟುಂಬ ಪರಿವರ್ತನೆ ತರಬೇಕು ಎಂದು ನಿಮ್ಮ ಶಾಸಕರು ಪಣ ತೊಟ್ಟಿದ್ದಾರೆ. ಉಳಿ ಪೆಟ್ಟು ಬೀಳದೇ ಕಲ್ಲು ಶಿಲೆಯಾಗುವುದಿಲ್ಲ, ಉಳುಮೆ ಮಾಡದೇ ಹೊಲ ಮಟ್ಟವಾಗುವುದಿಲ್ಲ. ಅದೇ ರೀತಿ ಶಿವಲಿಂಗೇಗೌಡರು ಕೆಲಸ ಮಾಡಿಕೊಂಡು ನಿಮ್ಮ ಸೇವೆ ಮಾಡುತ್ತಿದ್ದಾರೆ. ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದ ಕಾರಣಕ್ಕೆ ದೇಶಕ್ಕೆ ಮಾದರಿಯಾಗುವ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ” ಎಂದರು.
ಡಬಲ್ ಇಂಜಿನ್ ಆಡಳಿತ ಮಾಡಿದ ಬಿಜೆಪಿ ಕೊಡುಗೆ ಏನು?
“ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾಗಲು ನಾನು, ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಚರ್ಚೆ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆವು. ಬಿಜೆಪಿ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಧರ್ಮ, ದೇವರು ಕೇವಲ ಬಿಜೆಪಿ ಆಸ್ತಿಯಲ್ಲ. ನಾವು ಎಲ್ಲಾ ಧರ್ಮ ಕಾಪಾಡಲು ಶ್ರಮಿಸುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಈ ಯೋಜನೆ ನೀಡಿದ್ದೇವೆ. ನಿಮ್ಮ ಮನೆಗಳಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್, 2 ಸಾವಿರ ಪ್ರೋತ್ಸಾಹ ಧನ, ಉಚಿತ ಅಕ್ಕಿ, ಉಚಿತ ಬಸ್ ಪ್ರಯಾಣ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇಂತಹ ಒಂದೇ ಒಂದು ಕೆಲಸವನ್ನು ನಿಮ್ಮ ಅವಧಿಯಲ್ಲಿ ಮಾಡಿದ್ದೀರಾ ಎಂದು ಬಿಜೆಪಿ ನಾಯಕರನ್ನು ಕೇಳಲು ಬಯಸುತ್ತೇನೆ. ಈ ವಿಚಾರದಲ್ಲಿ ದಳದವರನ್ನು ನಾನು ಕೇಳಲು ಹೋಗುವುದಿಲ್ಲ” ಎಂದರು.
“ಅಲ್ಲಮ ಪ್ರಭುಗಳ ಮಾತಿನಂತೆ ಕೊಟ್ಟ ಕುದುರೆ ಏರಲರಿಯದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇರೀತಿ ಅಧಿಕಾರ ಸಿಕ್ಕಾಗ ಇಂತಹ ಯೋಜನೆ ಜಾರಿ ಮಾಡಲಿಲ್ಲ. ನಿಮಗೆ ಡಬಲ್ ಇಂಜಿನ್ ಸರ್ಕಾರದ ಅಧಿಕಾರ ಸಿಕ್ಕಿತ್ತು. ಆಗ ಏನು ಮಾಡಿದ್ದೀರಿ? ಈಗ ಬಿಜೆಪಿ ಜೊತೆ ದಳದವರೂ ಸೇರಿಕೊಂಡಿದ್ದಾರೆ. ಇವರಿಬ್ಬರು ಮಾತ್ರವಲ್ಲ, ಇವರ ಜೊತೆಗೆ ಇನ್ನೂ ನಾಲ್ಕು ಜನ ಸೇರಿಕೊಳ್ಳಲಿ, 2028ರಲ್ಲಿ ಈ ಜನಪರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ವರ್ಷ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸುಪುತ್ರ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರ ಗೆಲ್ಲಲು ಯಾಕೆ ಆಗಲಿಲ್ಲ? ಡಬಲ್ ಇಂಜಿನ್ ಸರ್ಕಾರ ಆಡಳಿತ ಮಾಡಿದವರು ಯಾಕೆ ಗೆಲ್ಲಲಿಲ್ಲ? ಈ ಗೆಲುವಿನಿಂದ ನಮ್ಮ ಸಂಖ್ಯಾಬಲ 140 ಆಗಿದೆ” ಎಂದು ತಿಳಿಸಿದರು.
“ದೇವರು ವರ ಹಾಗೂ ಶಾಪ ಕೊಡುವುದಿಲ್ಲ. ಕೇವಲ ಅಕಾಶ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಹೇಮಾವತಿ, ಎತ್ತಿನಹೊಳೆಯಿಂದ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸಗಳನ್ನು ಮಾಡಿದ್ದೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಸಂಸತ್ ಸದಸ್ಯರು ಹಾಗೂ ಶಾಸಕರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.