*ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕುರಿತು ಗ್ರಾಮಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದೀರ್ಘ ಚರ್ಚೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತಂತೆ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಸುದೀರ್ಘ ಚರ್ಚೆ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ.ಕೆ, ನಿಲಜಿ, ದೇಸೂರ್, ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು, ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರ್ಕರಿ ಮಂಡಳಿಯವರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು.
ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸಗಳು, ಮುಂದಿನ ದಿನಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುಧೀರ್ಘ ಕಾಲ ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ, ದೇವಸ್ಥಾನಗಳ ಸಮಿತಿಯ ಸದಸ್ಯರ, ವಾರ್ಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದ ಸಚಿವರು, ಯಾವುದೇ ರಾತಿಯ ರಾಜಕಾರಣ, ಭೇದ ಭಾವವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವೆ. ಸಣ್ಣ ಸಮಸ್ಯೆ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದೇನೆ. ಕ್ಷೇತ್ರದ ಜನರ ಆಶಿರ್ವಾದ ನನ್ನ ಮೇಲಿರುವುದರಿಂದ ರಾಜ್ಯದ ಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಕೂಡ ನಿಮ್ಮ ಜೊತೆಗೆ, ನಿಮ್ಮ ಮನೆ ಮಗಳಾಗಿ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ ಹಾಗೂ ಕ್ಷೇತ್ರದ ಹಲವಾರು ಮುಖಂಡರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.