*ಸ್ಮಾರ್ಟ್ ಕ್ಲಾಸ್, ವಿಜ್ಞಾನ ಪ್ರದರ್ಶನಾಲಯ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎಲ್ಲ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ವಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದ್ದಾರೆ.
ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಕ್ಲಾಸ್ ಮತ್ತು ಸಮಾಜ ವಿಜ್ಞಾನ ಪ್ರದರ್ಶನಾಲಯದ ಉದ್ಘಾಟನೆ ಹಾಗೂ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರ 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿ.ಎಂ.ಎಫ್) ಯೋಜನೆಯಡಿಯಲ್ಲಿ ಈ ಪ್ರೌಢಶಾಲೆಯ ಸುಣ್ಣ ಬಣ್ಣ ಹಾಗೂ ಸ್ಮಾರ್ಟ್ ಕ್ಲಾಸ್ ಕಾಮಗಾರಿಗೆ ಸುಮಾರು 10 ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುರೇಶ ಸಣ್ಣಕ್ಕಿ, ಬಸವರಾಜ ಸಣ್ಣಕ್ಕಿ, ಸಿದ್ಧಾರೂಢ ಬೊಸಣ್ಣವರ, ಶೈಲಾ ಪಾಟೀಲ, ಶಿವಾನಂದ ಅಂಗಡಿ, ಆನಂದಯ್ಯ ಪೂಜಾರಿ, ವೀರಭದ್ರ ಸಣ್ಣಕ್ಕಿ, ಗ್ರಾಮದ ಅನೇಕ ಹಿರಿಯರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.