*ಚರ್ಮಕಾರರು ಮಾದಿಗರಲ್ಲ, ಪ್ರತ್ಯೇಕ ಮೀಸಲಾತಿ ಬೇಕೇ ಬೇಕು; ಚರ್ಮಕಾರ ಮಹಾಸಭಾ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂಲತಃ ಚಮ್ಮಾರ ವೃತ್ತಿಯನ್ನು ಮಾಡುವ ೨೨ ಉಪಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡುವಂತೆ ಬೆಳಗಾವಿಯ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಮತ್ತು ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್ ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಬೆಳಗಾವಿ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಅಧ್ಯಕ್ಷ ಭೀಮರಾವ್ ಪವಾರ್, ಚರ್ಮಕಾರ ಗುಂಪಿನ ಜಾತಿಗಳನ್ನು ಮಾದಿಗ ಸಮುದಾಯದೊಂದಿಗೆ ಸೇರಿಸಿ ಮೀಸಲಾತಿ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.
ಪ್ರತ್ಯೇಕ ಮಿಸಲಾತಿಗಾಗಿ ೨೦೨೫ರ ಜನವರಿ ೩೧ ರಂದು ಚರ್ಮಕಾರ ಮಹಾಸಭಾ ಅಧ್ಯಕ್ಷನಾದ ನನ್ನ ನೇತೃತ್ವದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಮತ್ತೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ ಇದೇ ಮನವಿಯನ್ನು ಮುಖ್ಯಮಂತ್ರಿಯವರಿಗೂ ಸಲ್ಲಿಸಲಾಗಿದೆ. ಇಷ್ಟಾದರೂ ಈ ವಿಷಯದಲ್ಲಿ ಸರ್ಕಾರ ಯಾವುದೇ ಮಹತ್ವದ ಕ್ರಮ ಕೈಗೊಳ್ಳದಿರುವುದು ಸಮಾಜ ಬಾಂಧವರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಪವಾರ್ ಹೇಳಿದರು.
ಚರ್ಮಕಾರ ಜಾತಿಗಳಾದ ಸಮಗಾರ, ಚಮ್ಮಾರ, ಚಾಂಬಾರ, ಚಮಗಾರ, ಹರಳಯ್ಯ, ಹರಳಿ, ರವಿದಾಸ್, ಮೋಚಿ, ಮೋಚಿಗಾರ, ಮುಚ್ಚಿಗ, ಮಚಿಗಾರ, ಘೋರ, ಡೋಹರ, ಕಕ್ಕಯ್ಯ, ಭಂಬಿ, ಅಸೂಡಿ ಇತ್ಯಾದಿ ಹೆಸರಿನ ಒಟ್ಟು ೨೨ ಉಪನಾಮ ಹೊಂದಿರುವ ಏಕರೂಪವೃತ್ತಿಯ ಅಂದರೆ ಚರ್ಮದ ಕೆಲಸ ಮಾಡುವ ಒಂದೇ ಗುಂಪಿನ ಜಾತಿಗಳಾಗಿವೆ. ಚರ್ಮಕಾರರು ಉತ್ತರ ಭಾರತ ಹಾಗೂ ತೆಲಂಗಾಣ ಪ್ರದೇಶದಿಂದ ವಲಸೆ ಬಂದು ಕರ್ನಾಟಕದ ಉತ್ತರ ಭಾಗದಲ್ಲಿ ವಾಸಿಸುತ್ತಿದ್ದು, ಈಗಲೂ ಸಹ ಚರ್ಮದ ವೃತ್ತಿಯನ್ನೇ ಅವಲಂಬಿಸಿದ್ದಾರೆ ಎಂದು ಭೀಮರಾವ್ ಪವಾರ್ ಮಾಹಿತಿ ನೀಡಿದರು.
ಇವರು ಮೂಲತಃ ಶರಣ ಹರಳಯ್ಯನವರ ಹಾಗೂ ಶರಣ ಕಕ್ಕಯ್ಯನವರ ವಂಶಜರಾಗಿದ್ದಾರೆ. ಇವರ ವಾಸ ಆಹಾರ ಪದ್ಧತಿ ಹುಡುಗಿ ಸಾಮಾಜಿಕ ಜೀವನ ಪದ್ಧತಿ, ಧಾರ್ಮಿಕ ಆಚರಣೆಗಳು ಹಳೆಯ ಮೈಸೂರು ಭಾಗದ ಮಾದಿಗ ಮತ್ತು ಹೊಲೆಯ ಜಾತಿಗಳಿಗಿಂತ ಸಂಪೂರ್ಣ ಭಿನ್ನವಾಗಿವೆ. ಮೈಸೂರು ಪ್ರಾಂತ್ಯದಲ್ಲಿ ಚಮ್ಮಾರರು ಇರಲಿಲ್ಲ. ಆದ ಕಾರಣ ಮಾದಿಗರು ಚಪ್ಪಲಿ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ನಂತರ ಮೀಸಲಾತಿ ನೀಡುವಾಗ ಚರ್ಮದ ಕೆಲಸ ಮಾಡುವವರು ಎಂಬ ಒಂದೇ ಕಾರಣಕ್ಕಾಗಿ ಚರ್ಮಕಾರರನ್ನು ಮಾದಿಗ ಸಂಬಂಧಿತ ಜಾತಿಗಳೆಂದು ಮಾದಿಗರೊಂದಿಗೆ ತಪ್ಪಾಗಿ ಸೇರ್ಪಡೆ ಮಾಡಿದ್ದರಿಂದ ಮೀಸಲಾತಿಯ ಬಹುಪಾಲು ಸೌಲಭ್ಯಗಳು ಮಾದಿಗರಿಗೇ ತಲುಪಿದ್ದು ಚರ್ಮಕಾರರಿಗೆ ತಲುಪದೇ ಚರ್ಮಕಾರರು ಇಂದಿಗೂ ಹಿಂದುಳಿದಿದ್ದಾರೆ ಎಂದು ಪವಾರ್ ಅಸಮಾಧಾನ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮತ್ತೋರ್ವ ಮುಖಂಡ ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್ ರಾಜ್ಯ ಸಂಚಾಲಕ ಪರಮಾನಂದ ಘೋಡಕೆ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮೀಸಲಾತಿಯ ಸೌಲಭ್ಯಗಳು ತಲುಪದೇ ಇರುವ ಚರ್ಮಕಾರ ಜಾತಿಗಳಿಗೂ ಸಹ ಮೀಸಲಾತಿಯ ಸೌಲಭ್ಯ ತಲುಪುವಂತೆ ಉಪ ವರ್ಗೀಕರಣ ಮಾಡುವ ಜವಾಬ್ದಾರಿಯು ಕರ್ನಾಟಕ ಸರ್ಕಾರ ಹಾಗೂ ಏಕ ಸದಸ್ಯ ಆಯೋಗದ ಮೇಲೆ ಇದೆ. ಕಾರಣ ಅಸ್ಪೃಶ್ಯ ಜಾತಿಗಳಲ್ಲಿ ಮಾದಿಗ ವಲಯ ಜಾತಿಗಳ ನಂತರ ಚಮ್ಮಾರರು ಅಂದರೆ ಚರ್ಮಾಕಾರ ಉಪಜಾತಿಗಳ ಜನರು ಅತ್ಯಂತ ಪ್ರಮುಖರಾಗಿದ್ದಾರೆ ಎಂದರು.
ಆದ್ದರಿಂದ ೧. ಮಾದಿಗ ಮತ್ತು ಸಂಬಂಧಿತ ೨. ಹೊಲೆಯ ಮತ್ತು ಸಂಬಂಧಿತ ಹಾಗೂ ೩. ಚಮ್ಮಾರ ಮತ್ತು ಸಂಬಂಧಿತ ಎಂದು ಅಸ್ಪೃಶ್ಯ ಜಾತಿಗಳನ್ನು ಮೂರು ಗುಂಪುಗಳನ್ನಾಗಿ ವರ್ಗೀಕರಿಸಿದರೆ ಮಾತ್ರ ಚರ್ಮ ಕಾರರಿಗೂ ಮೀಸಲಾತಿಯ ಸೌಲಭ್ಯ ಸಿಗಲಿದೆ. ಒಂದು ವೇಳೆ ಹೀಗೆ ಮಾಡದಿದ್ದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಿಂದನೆ ಆಗಲಿದೆ. ಹೀಗಾಗಿ ೨೨ ಉಪನಾಮಗಳಿರುವ ಚರ್ಮಕಾರ ಚಮ್ಮಾರ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಬೇಕೆಂದು ಘೋಡಕೆ ಸರ್ಕಾರಕ್ಕೆ ಒತ್ತಾಯಿಸಿದರು.
ಚರ್ಮಕಾರ ಸಮಾಜದ ಬೇಡಿಕೆಗಳಿಗೆ ಸರ್ಕಾರ ಬೇಗನೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಭೀಮರಾವ್ ಪವಾರ್ ಮತ್ತು ಪರಮಾನಂದ ಘೋಡಕೆ ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಢೋರ ಸಮಾಜ ಅಧ್ಯಕ್ಷ ಮಹಾದೇವ ಪೋಳ, ಕಾರ್ಯಕಾರಿ ಸದಸ್ಯ ವಿಠ್ಠಲ ಪೋಳ, ಮನೋಹರ ಕದಮ, ಹೀರಾ ಚೌಹಾಣ್, ಸಂತೋಷ ಹಾನಗಲ್, ಎನ್ ಆರ್ ಕದಮ, ವಿವೇಕ ಶಿರೇಕರ್, ಪ್ರಭಾಕರ ಪೋಳ, ತ್ಯಾಗರಾಜ ಕದಮ, ಶಂಕರ ಎಂ ಕಾಮತ, ಹಿರೋಜಿ ಮಾವರಕರ, ಮನೋಹರ ಮಂಡೋಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.