
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಗಾಂಧಿನಗರದಲ್ಲಿ ರವಿವಾರ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಖಾನಾಪುರ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾಗಿರುವ ಸುರೇಶ್ ತಿಮ್ಮಣ್ಣ ಬಂಡಿವಡ್ಡರ ಹೆಂಡತಿ ಜೊತೆ ಗಾಂಧಿನಗರದ ನಿವಾಸಿ ಅನಿಲ್ ಬಂಡಿವಡ್ಡರ್ (25) ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲವು ದಿನಗಳಿಂದ ಸುರೇಶ್ ಮತ್ತು ಅನಿಲ್ ನಡುವೆ ಜಗಳ ನಡೆಯುತ್ತಿತ್ತು. ಇದನ್ನ ರಾಜೀ ಸಂಧಾನ ಮಾಡಲೆಂದು ಊರಿನ ಮುಖಂಡರು ದೇವಸ್ಥಾನದ ಸಂಧಾನ ಸಭೆಯನ್ನ ಏರ್ಪಡಿಸಿದ್ದರು. ಸಭೆಯಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಸ್ಥಳದಲ್ಲೇ ಯಲ್ಲಪ್ಪ ಬಂಡಿವಡ್ಡರ್ ಪತ್ನಿ ಸಾವಿತ್ರಿ ಬಂಡಿವಡ್ಡರ್ ಹಾಗೂ ಮಗ ಅನಿಲ್ ಬಂಡಿವಡ್ಡರ್ ಏಕಾಏಕಿ ಸುರೇಶ್ ಮೇಲೆ ಹಲ್ಲೆ ನಡೆಸಿದ್ದು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಸುರೇಶ್ ಮೃತಪಟ್ಟಿದ್ದಾನೆ.
ಘಟನೆ ತಿಳಿದು ಸ್ಥಳಕ್ಕೆ ಬಂದ ಬೈಲಹೊಂಗಲ ಡಿವೈಎಸ್ಪಿ ವಿರೇಶ್ ಹಿರೇಮಠ, ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ಎಲ್.ಎಫ್ ಗೌಂಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಾದ ಯಲ್ಲಪ್ಪ ಬಂಡೀವಡ್ಡರ್(60) ಸಾವಿತ್ರಿ ಬಂಡೀವಡ್ಡರ್ (55) ಅನಿಲ್ ಬಂಡೀವಡ್ಡರ್(24) ಎಂಬ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.