
ಪ್ರಗತಿವಾಹಿನಿ ಸುದ್ದಿ: ಅಗ್ನಿಪಥ ಯೋಜನೆಯಡಿಯಲ್ಲಿ ಸೇನೆಗೆ ಸೇರಿದ್ದ ಕಿರಣರಾಜ್ ಪಂಜಾಬ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದ ಕಿರಣರಾಜ ಕೇದಾರಿ ತೆಲಸಂಗ (23)ಮೃತ ಯೋಧ.
ಒಂದು ವರ್ಷದ ಹಿಂದೆ ಭಾರತೀಯ ಸೇನೆಗೆ ಸೇರಿದ್ದ ಕಿರಣರಾಜ್, ತರಬೇತಿ ಪೂರ್ಣಗೊಳಿಸಿ ಆರು ತಿಂಗಳ ಹಿಂದೆ ರಜೆಯ ಮೇಲೆ ಊರಿಗೆ ಬಂದು ಮತ್ತೆ ಪಟಿಯಾಲಾ ರೆಜಿಮೆಂಟ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಮಂಗಳವಾರ ಮುಂಜಾನೆ, ಪ್ರತಿ ದಿನದಂತೆ ಓಟದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೈದಾನದಲ್ಲೇ ಕುಸಿದು ಬಿದ್ದು, ಹೃದಯಾಘಾತದಿಂದ ಸಾವಿಗೀಡಾದರೆಂದು ಸೇನಾ ಮೂಲಗಳು ತಿಳಿಸಿವೆ.
ಕಿರಣರಾಜ್ ಅವರ ನಿಧನದ ಸುದ್ದಿ ಐಗಳಿ ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದ್ದು, ಮೃತ ಯೋಧನ ಪಾರ್ಥಿವ ಶರೀರವು ಬುಧವಾರ ಸಂಜೆ ದೆಹಲಿಯಿಂದ ವಿಮಾನ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲಿದೆ. ನಂತರ ಭಾರತೀಯ ಸೇನೆಯ ವಾಹನದಲ್ಲಿ ಐಗಳಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬಳಿಕ ಸೈನಿಕ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.