Belagavi NewsBelgaum NewsKannada NewsKarnataka NewsLatest
*ಮಳೆಗೆ ಉಕ್ಕಿ ಹರಿದ ಹಳ್ಳ: ಉಗರಗೋಳ ಗ್ರಾಮ ಜಲಾವೃತ: ಯಲ್ಲಮ್ಮನ ದರ್ಶನಕ್ಕೆ ಹೊರಟ ಭಕ್ತರ ಪರದಾಟ *

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ನೂಲ ಹುಣ್ಣಿಮೆ ಪ್ರಯುಕ್ತ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಭಕ್ತರು ದೌಡಾಯಿಸಿದರು. ಆದರೆ ಇಂದು ಮಧ್ಯಾಹ್ನ ಬಿಟ್ಟು ಬಿಡದೇ ಸುರಿದ ಭಾರಿ ಮಳೆಗೆ ಭಕ್ತರು ಪರದಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಉಗರಗೋಳ– ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿದಿದೆ.
ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡು ಹರಿದುಬರುತ್ತಿದೆ. ಆದರೆ, ಮಧ್ಯಾಹ್ನ 3 ಗಂಟೆಯಿಂದ ಎರಡು ತಾಸಿಗೂ ಅಧಿಕ ಹೊತ್ತು ಧಾರಾಕಾರ ಮಳೆಯಾಗಿ ಸಂಪರ್ಕ ಕಡಿತಗೊಂಡಿದ್ದು, ಹಳ್ಳದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಈ ಮಳೆಯಿಂದ ಉಗರಗೋಳ ಗ್ರಾಮವೇ ಮುಳುಗಡೆಯಾಗಿದೆ. ಐದು ಬೈಕ್ ಗಳು ಕೊಚ್ಚಿಹೊಗಿವೆ. ಕೆಲವು ಭಕ್ತರು ಸುತ್ತು ಬಳಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ.