
ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆ ಪ್ರಕರಣಕ್ಕೆ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿ: ಮಹಿಳೆಯ ಮೃತದೇಹದ ತುಂಡುಗಳು ರಸ್ತೆಯುದ್ದಕ್ಕೂ ಸಿಕ್ಕಿದ್ದ ಘಟನೆ ತುಮಕೂರಿನ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅತ್ತೆಯ ಕಾಟಕ್ಕೆ ಬೇಸತ್ತು ದಂತ ವೈದ್ಯನಾಗಿದ್ದ ಅಳಿಯನೇ ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಎಂಬುದು ಬಯಲಾಗಿದೆ. ಸದ್ಯ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದ್ದು, ಲಕ್ಷ್ಮೀದೇವಮ್ಮ ಎಂದು ಗುರುತಿಸಲಾಗಿದೆ.
ದಂತ ವೈದ್ಯ ರಾಮಚಂದ್ರಯ್ಯ, ಸತೀಶ್ ಹಾಗೂ ಕಿರಣ್ ಎಂಬ ಮೂವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಕೊರಟಗೆರೆಯ ಚಿಂಪುಗಾನಹಳ್ಳಿ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆವರೆಗೆ 17 ಸ್ಥಳಗಳಲ್ಲಿ ಕವರ್ ನಲ್ಲಿ ಮಹಿಳೆಯ ಮೃತದೇಹದ ತುಂಡುಗಳು ಪತ್ತೆಯಾಗಿದ್ದವು. ಈ ಪ್ರಕರಣದಿಂದ ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಇದೀಗ ಅಳಿಯನೇ ಅತ್ತೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅತ್ತೆಯನ್ನು ಕೊಲೆಗೈದಿದ್ದ ಅಳಿಯ ರಾಮಚಂದ್ರಯ್ಯ ಹಾಗೂ ಆತನ ಇಬ್ಬರು ಸ್ನೇಹಿತರು ಬಳಿಕ ಮೃತದೇಹವನ್ನು ತುಂಡು ತುಂಡು ಮಾಡಿ ಬಿಸಾಕಿದ್ದರು.
ಬಳಿಕ ರಾಮಚಂದ್ರಯ್ಯ ಧರ್ಮಸ್ಥಳಕ್ಕೆ ತೆರಳಿದ್ದ. ಪೊಲೀಸರು ಅನುಮಾನಗೊಂಡು ರಾಮಚಂದ್ರಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.