Karnataka NewsLatestPolitics

*ಪ್ರಾಥಮಿಕ ಶಿಕ್ಷಣಕ್ಕಾಗಿ ಸಿಎಸ್ಆರ್ ನಿಧಿ ಬಳಸಿ: ಡಿಸಿಎಂ ಕರೆ*

ಐಟಿ ರಫ್ತಿನಲ್ಲಿ ಬೆಂಗಳೂರಿನದೇ ಸಿಂಹಪಾಲು: ಬೆಂಗಳೂರು ಟೆಕ್ ಸಮಿಟ್ 2025 ಇಡೀ ವಿಶ್ವಕ್ಕೆ ದೊಡ್ಡ ಸಂದೇಶ ರವಾನಿಸಬೇಕು:

ಪ್ರಗತಿವಾಹಿನಿ ಸುದ್ದಿ: “ನವೆಂಬರ್ ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ 2025 ಇಡೀ ವಿಶ್ವಕ್ಕೆ ದೊಡ್ಡ ಸಂದೇಶ ರವಾನಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.

ಬೆಂಗಳೂರು ಟೆಕ್ ಸಮಿಟ್ 2025 ಕುರಿತು ಖಾಸಗಿ ಹೊಟೇಲ್ ನಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ಹಾಗೂ ಉದ್ಯಮಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನಾವು ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ಭಾರತದಲ್ಲಿ ಬೆಂಗಳೂರನ್ನು ಜಾಗತಿಕ ಐಟಿ ರಾಜಧಾನಿಯಾಗಿ ನೋಡಲಾಗುತ್ತಿದೆ. ಹೀಗಾಗಿ ನಮ್ಮ ಸಚಿವರು ಜಾಗತಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನವೆಂಬರ್ 18 ರಿಂದ 20ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ ನಲ್ಲಿ 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.

Home add -Advt

“ಬೆಂಗಳೂರಿನ ಬಗ್ಗೆ ನಿಮಗೆ ಗೊತ್ತಿದೆ. ಇಲ್ಲಿನ ಪ್ರತಿಭೆ, ಹವಾಮಾನ, ಪ್ರಗತಿ ಬಗ್ಗೆ ನಿಮಗೆ ಗೊತ್ತೇ ಇದೆ. ನಿನ್ನೆ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಿದ್ದರು. ಬೆಂಗಳೂರಿನ ಬಗ್ಗೆ ಅವರು ಆಡಿದ್ದ ಮಾತುಗಳನ್ನು ನೀವು ಕೇಳಿದ್ದೀರಿ. ಬೆಂಗಳೂರು ಜಾಗತಿಕ ನಗರ ಎಂಬುದನ್ನು ಅವರೂ ಒಪ್ಪಿದ್ದಾರೆ. ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ ಎಂದು ಹೇಳಿದ್ದಾರೆ” ಎಂದರು.

“ಐಟಿ, ಬಿಟಿ, ಸಂಶೋಧನೆ ಸೇರಿದಂತೆ ವ್ಯಾಪಾರ ಉದ್ದೇಶಿತ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಗಳು ಬೆಂಗಳೂರಿನಲ್ಲಿವೆ. ಸುಮಾರು 7 ಸಾವಿರ ವಿದೇಶಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಐಟಿ ನೀತಿ ಇದಕ್ಕೆ ಕಾರಣ. ಆಗ ನಗರಾಭಿವೃದ್ಧಿ ಸಚಿವನಾಗಿ ನಾನು ಭಾರತದ ರಾಯಭಾರಿಗಳನ್ನು ಭೇಟಿ ಮಾಡಿದಾಗ ನಮ್ಮಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳು ಬೇಕು ಎಂದು ಕೇಳಿದ್ದೆ. ಈಗ ನಮ್ಮಲ್ಲಿ ಸುಮಾರು 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳಿವೆ” ಎಂದು ಹೇಳಿದರು.

“ಇದು ವಿಶ್ವವೇ ನೋಡುತ್ತಿರುವ ನಗರ. ಬೆಂಗಳೂರಿನ ಈ ಹಿರಿಮೆಗೆ ಕೇವಲ ನಾವಷ್ಟೇ ಅಲ್ಲ, ಇಲ್ಲಿನ ಎಲ್ಲಾ ಪ್ರತಿಭೆಗಳು ಕಾರಣ. ನೀವೆಲ್ಲರೂ ಸೇರಿ ಬೆಂಗಳೂರು ಹಾಗೂ ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದೀರಿ. ಹೀಗಾಗಿ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷ ದೇಶದಾದ್ಯಂತ ಸುಮಾರು 2 ಲಕ್ಷ ಟೆಕ್ಕಿಗಳು ಬೆಂಗಳೂರಿಗೆ ಬರುತ್ತಾರೆ. ಕ್ಯಾಲಿಫೋರ್ನಿಯಾ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಗಿಂತ ಹೆಚ್ಚಿನ ಐಟಿ ಪ್ರಗತಿ ಬೆಂಗಳೂರಿನಲ್ಲಾಗುತ್ತಿದೆ” ಎಂದರು.

“385 ಬಿಲಿಯನ್ ಐಟಿ ರಫ್ತಿನಲ್ಲಿ ನಮ್ಮ ಪಾಲು 160 ಬಿಲಿಯನ್. 80% ರಷ್ಟು ಅಂದರೆ 1 ಲಕ್ಷ ಪಿಹೆಚ್ ಡಿ ಹೊಂದಿರುವವರು ಇದ್ದಾರೆ. ಬೆಂಗಳೂರು ಹಾಗೂ ಕರ್ನಾಟಕವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಉದ್ಯಮಗಳನ್ನು ಬೆಂಗಳೂರಿನಿಂದ ಹೊರಗಿನ ನಗರಗಳಿಗೆ ಕೊಂಡೊಯ್ಯಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕಾಗಿ ಹೊಸ ನೀತಿ ರೂಪಿಸಲಾಗಿದೆ. ಈ ಬಗ್ಗೆ ನಾವು ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದ್ದೆವು. ಈ ನೀತಿ ಮೂಲಕ ಐಟಿ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ಕಲ್ಪಿಸಲಾಗುತ್ತಿದೆ. ನಮ್ಮ ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳು ಹೆಚ್ಚಾಗಿವೆ. ಇದು ರಾಜ್ಯದ ಶಕ್ತಿ” ಎಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಣಕ್ಕಾಗಿ ಸಿಎಸ್ಆರ್ ನಿಧಿ ಬಳಸಿ:

“ಸಿಎಸ್ಆರ್ ವಿಚಾರದಲ್ಲಿ ನಾನು ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ. ನೀವು ನಿಮ್ಮ ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಇದಕ್ಕಾಗಿ ನೀತಿ ರೂಪಿಸಿದ್ದು, ಪ್ರತಿ 2-3 ಪಂಚಾಯ್ತಿಗೆ ಒಂದು ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈಗಾಗಲೇ ಟೊಯೋಟಾ ನೆರವಿನಿಂದ 7 ಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ರೆಸ್ಟೀಜ್, ಎಂಬಸಿ ಸೇರಿದಂತೆ ಹಲವರು ಶಾಲೆಗಳ ನಿರ್ಮಾಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣಕ್ಕೆ ನಾವು ಮುಂದಾಗಿದ್ದೇವೆ. ನೀವು ನಮಗೆ ಹಣ ನೀಡಬೇಡಿ. ನಾವು ನಿಮಗೆ ಜಾಗ ನೀಡುತ್ತೇವೆ. ನೀವು ಶಾಲೆ ನಿರ್ಮಿಸಿದರೆ ಸಾಕು. ನೀವು ನಮಗೆ ಹಣ ಕೊಟ್ಟರೆ ಅದರಲ್ಲೂ 18% ತೆರಿಗೆ ಪಾವತಿಸಬೇಕಾಗುತ್ತದೆ” ಎಂದರು.

“ಮಕ್ಕಳ ಶಿಕ್ಷಣಕ್ಕೆ ನಾವು ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಸುಮಾರು 50 ಸಾವಿರ ಸರ್ಕಾರಿ ಶಾಲೆ ಶಿಕ್ಷಕರ ಹುದ್ದೆ ಖಾಲಿ ಇವೆ. ಹೀಗಾಗಿ ಖಾಸಗಿ ಶಾಲೆಗಳು ಇಂತಹ ಗ್ರಾಮೀಣ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಲಾಗಿದೆ. ಹೀಗಾಗಿ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಸಾರ ಶಾಲೆಗಳ ನಿರ್ಮಾಣಕ್ಕೆ ನೆರವು ನೀಡಿ. ಈ ಬಗ್ಗೆ ಗಮನಹರಿಸಿ. ನೀವೆಲ್ಲರೂ ಕೇವಲ ಬೆಂಗಳೂರಿನ ಅಭಿವೃದ್ಧಿ ಮಾತ್ರವಲ್ಲ, ಕರ್ನಾಟಕದ ಪ್ರಗತಿಯ ಭಾಗವಾಗಬೇಕು ಎಂಬುದು ನಮ್ಮ ಆಶಯ. ನಿಮ್ಮ ಸಿಎಸ್ಆರ್ ನಿಧಿಯನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ನೀವು ಇದಕ್ಕಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಿಲ್ಲ. ಸಿಎಸ್ಆರ್ ನಿಧಿಗೆ ನೀವು ಎಷ್ಟು ನೀಡುತ್ತೀರೋ ಅದನ್ನು ನೀಡಿದರೆ ಸಾಕು. ನಿಮ್ಮ ಆದ್ಯತೆ ಪ್ರಾಥಮಿಕ ಶಿಕ್ಷಣಕ್ಕೆ ಇರಲಿ. ಮುಂದೆ ನಾವು ಆರೋಗ್ಯ ಕ್ಷೇತ್ರಕ್ಕೆ ಕಾಲಿಡಬಹುದು” ಎಂದು ಹೇಳಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಮೊತ್ತದ ಯೋಜನೆ

“ಬೆಂಗಳೂರಿನ ಮೂಲಕ ಹೆಚ್ಚು ಐಟಿ ತೆರಿಗೆ ಪಾವತಿಸುತ್ತಿದ್ದೇವೆ. ನಿನ್ನೆ ಪ್ರಧಾನಮಂತ್ರಿಗಳ ಬಳಿ ನಾನು ಇದೇ ವಿಚಾರ ಪ್ರಸ್ತಾಪ ಮಾಡಿ, ನೀವು ಬೆಂಗಳೂರನ್ನು ರಾಜ್ಯದ ರಾಜಧಾನಿಯಾಗಿ ನೋಡಬೇಡಿ, ರಾಷ್ಟ್ರದ ರಾಜಧಾನಿಯಾಗಿ ನೋಡಿ. ಬೆಂಗಳೂರಿನಲ್ಲಿರುವ ಸಂಚಾರ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತ್ಯಾಜ್ಯ ವಿಲೇವಾರಿ ವಿಚಾರವಾಗಿ ಯಾರಾದರೂ ಸಂಶೋಧನೆ ಮಾಡಲು ಆಸಕ್ತರಿದ್ದರೆ, ನಾವು ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ. ಈ ವಿಚಾರದಲ್ಲಿ ನೀವು ಬೆಂಬಲ ನೀಡಿ, ನಮಗೆ ಮಾರ್ಗದರ್ಶನ ನೀಡಬೇಕು. ಇದು ಬೆಂಗಳೂರಿನ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಾವು 1.50 ಲಕ್ಷ ಕೋಟಿ ಮೀಸಲಿಟ್ಟಿದ್ದು, 40 ಸಾವಿರ ಕೋಟಿ ವೆಚ್ಚದಲ್ಲಿ 50 ಕಿ.ಮೀ ಉದ್ದದ 2 ಟನಲ್ ರಸ್ತೆ, 110 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್, 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಿಸುತ್ತಿದ್ದೇವೆ” ಎಂದು ವಿವರಿಸಿದರು.

“ಬೆಂಗಳೂರು ಕೆಂಪೇಗೌಡರು ಕಟ್ಟಿದ ನಗರ. ಇದು ಈ ಪ್ರಮಾಣಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಬೆಂಗಳೂರು ಯೋಜಿತ ನಗರವಲ್ಲ ಆದರೆ ನಾವು ಸಾಧ್ಯದಷ್ಟು ಪರ್ಯಾಯ ಮಾರ್ಗದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈಗ ಗ್ರೇಟರ್ ಬೆಂಗಳೂರು ಮೂಲಕ ಹೊಸ ನಗರಗಳ ನಿರ್ಮಾಣ ಮಾಡಲಾಗುವುದು. ಬಿಡದಿಯಲ್ಲಿ 10 ಸಾವಿರ ಎಕರೆಯಲ್ಲಿ ಟೌನ್ ಶಿಪ್ ಮಾಡಲಾಗುವುದು. ಮುಂದಿನ ಹತ್ತು, ಹದಿನಾದು ದಿನಗಳಲ್ಲಿ ಇದರ ಮಾಹಿತಿ ಬಿಡುಗಡೆ ಮಾಡಲಾಗುವುದು. ಇದರ ಜತೆಗೆ ಮೆಟ್ರೋವನ್ನು ಬಿಡದಿವರೆಗೆ ವಿಸ್ತರಣೆ ಮಾಡಲು ತಯಾರಿ ಮಾಡುತ್ತಿದ್ದೇವೆ. ಇನ್ನು ರಸ್ತೆ ಅಭಿವೃದ್ಧಿಗೆ 450 ಕಿ.ಮೀ ವೈಟ್ ಟ್ಯಾಪಿಂಗ್ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ನಾವೆಲ್ಲರೂ ಸೇರಿ ಕರ್ನಾಟಕವನ್ನು ಮುನ್ನಡೆಸೋಣ. ನೀವು ಬಲಿಷ್ಠರಾದಷ್ಟು ನಾವು ಬಲಿಷ್ಠವಾಗುತ್ತೇವೆ. ನೀವು ದುರ್ಬಲರಾದರೆ, ನಾವು ದುರ್ಬಲವಾಗುತ್ತೇವೆ ಎಂದು ನಾವು ನಂಬಿದ್ದೇವೆ. ನಿಮ್ಮ ಸಹಕಾರದಿಂದ ಸರ್ಕಾರ ರಾಜ್ಯ ಮುನ್ನಡೆಯಲು ಸಾಧ್ಯ. ದೇಶಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವುದು ಕರ್ನಾಟಕ. ಕೇಂದ್ರ ಸರ್ಕಾರ ಕೇವಲ 13% ಮಾತ್ರ ನಮಗೆ ತೆರಿಗೆ ಪಾಲು ನೀಡುತ್ತಿದೆ. ಇದರ ಬದಲು 25-30% ಪಾಲು ನೀಡಬೇಕು ಎಂದು ಪ್ರಧಾನಮಂತ್ರಿಗಳಿಗೆ ಪ್ರಸ್ತಾವನೆ ನೀಡಿದ್ದೇವೆ” ಎಂದು ತಿಳಿಸಿದರು.

Related Articles

Back to top button