*ಶರಣಬಸವಪ್ಪ ಅಪ್ಪನವರ ಅಗಲಿಕೆ ಡಾ.ಪ್ರಭಾಕರ ಕೋರೆ ತೀವ್ರ ಸಂತಾಪ*

ಪ್ರಗತಿವಾಹಿನಿ ಸುದ್ದಿ: ನಮ್ಮ ನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಲಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದ ಶೈಕ್ಷಣಿಕ ಮಹಾ ದಾಸೋಹಿ ಕಲಬುರಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಡಾ.ಶರಣ ಬಸವಪ್ಪನವರ ಅಗಲಿಕೆ ಸಮಸ್ತ ನಾಡಿ ಹಾಗೂ ಸಮಾಜಕ್ಕೆ ತುಂಬಲಾರದ ದುಃಖವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಶರಣ ದಾಸೋಹ ಪರಂಪರೆಯ ಕೊಂಡಿಯಾಗಿದ್ದ ಅಪ್ಪನವರು ಲಕ್ಷಾಂತರ ಮಕ್ಕಳಿಗೆ ಜ್ಞಾನ ಅನ್ನದಾಸೋಹಗಳನ್ನು ಸರ್ಮಪಿಸಿದ ಮೇರು ವ್ಯಕ್ತಿಗಳು. ನಾಡು ಹಾಗೂ ದೇಶದಲ್ಲಿ ಕಲಬುರಗಿಗೆ ಒಂದು ಘನತೆ ಗೌರವಗಳನ್ನು ತಂದುಕೊಟ್ಟ ಪುಣ್ಯಾತ್ಮರು. ಸಮಾಜದ ಸೇವೆಯನ್ನು ಒಂದು ವ್ರತದಂತೆ ಸ್ವೀಕರಿಸಿದ್ದ ಅವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಸಿವನ್ನು ನೀಗಿಸುವಲ್ಲಿ ಚಿರಸ್ಮರಣೀಯವಾದ ಕೊಡುಗೆಯನ್ನು ಸಲ್ಲಿಸಿದ್ದರು. ನಮ್ಮ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯನ್ನು ಮುಕ್ತವಾಗಿ ಪ್ರಶಂಸಿದ್ದ ಅಪ್ಪನವರ ಬೆಳಗಾವಿಯಲ್ಲಿ ಜರುಗಿದ್ದ 21ನೇ ಅಖಿಲ ಭಾರತ ವೀರಶೈವ ಮಹಾಸಭೆಯ ಸರ್ವಾಧ್ಯಕ್ಷರಾಗಿದ್ದನ್ನು ನಾನಿಲ್ಲಿ ಸ್ಮರಿಸುತ್ತೇನೆ. ಅವರ ಸೇವೆ ಸಮಾಜದಲ್ಲಿ ಹಸಿರಾಗಿ ಶಾಶ್ವತವಾಗಿ ಉಳಿದಿದೆ. ಶರಣ ಹೃದಯದ ಅಪ್ಪಾಜಿಯವರ ಅಗಲಿಕೆ ನೋವು ತಂದಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಸಮಸ್ತ ಕೆಎಲ್‌ಇ ಪರಿವಾರದಿಂದ ಭಾವಪೂರ್ವ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.