
ಪ್ರಗತಿವಾಹಿನಿ ಸುದ್ದಿ: ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಮುಖಂಡರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ.
ದೇವರ ದರ್ಶನ ಪಡೆದ ಬಳಿಕ ದರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಈ ವೇಳೆ ಹರ್ಷೇಂದ್ರ ಕುಮಾರ್ ಹಾಗೂ ಸುರೇಂದ್ರ ಕುಮಾರ್ ಅವರು ಜೊತೆಗಿದ್ದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಎಸ್‌ಐಟಿ ತನಿಖೆಯ ಬಗ್ಗೆ ಏನು ಆಕ್ಷೇಪವಿಲ್ಲ. ಆದರೆ ಎಸ್‌ಐಟಿ ತನಿಖೆಯ ನೆಪದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಹೇಳಿದರು.
ಎಸ್.ಐ.ಟಿ ರಚನೆಯಾದಾಗ, ನಾವೂ ಸ್ವಾಗತಿಸಿದ್ದೇವೆ. ಆದರೀಗ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ಸಹಿಸಲು ಸಾಧ್ಯವಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಈ ಬಗ್ಗೆ ಹೇಳಿದ್ದಾರೆ. ಆದರೆ ಅಂತಹ ಶಕ್ತಿಗಳ ವಿರುದ್ಧ ಕ್ರಮಕ್ಕೆ ಸರಕಾರ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ನಾಯಕರಾದ ಸಿ.ಟಿ.ರವಿ, ಚಲವಾದಿ ನರಾಯಣ ಸ್ವಾಮಿ, ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಯಶ್ ಪಾಲ್ ಸುವರ್ಣ ಹಾಗೂ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.