Belagavi NewsBelgaum NewsKannada NewsKarnataka News

*ಲೋಳಸೂರ ಸೇತುವೆ ಸಂಪೂರ್ಣ ಮುಳುಗಡೆ: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ: ಪ್ರವಾಹ ಪರಿಸ್ಥಿತಿ ಪರಿಶೀಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗೋಕಾಕ್ ನಗರದ ಲೋಳಸೂರ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಇಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಳುಗಡೆಯಾಗಿರುವ ಸೇತುವೆಗಳನ್ನು ಸಮೀಕ್ಷೆ ನಡೆಸಿ, ಹೊಸ ಸೇತುವೆ ನಿರ್ಮಾಣಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನದಿ ತೀರದ ಗ್ರಾಮಗಳಲ್ಲಿ ಮುಳುಗಡೆ ಪ್ರದೇಶದ ಜನರನ್ನು ಸ್ಥಳಾಂತರಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಕೊಯ್ನಾ ಜಲಾಶಯ ಮತ್ತು ಪಂಚಗಂಗಾ ನದಿಯಿಂದ 12 ಸಾವಿರ ಕ್ಯೂಸೆಕ್ಸ್ ನೀರು ಸಂಗ್ರಹಣೆಯಾಗಿ ಹರಿಯುತ್ತಿದೆ ಅಲ್ಲಿಂದ ಧೂದಗಂಗಾ-ವೇದಗಂಗಾ ಜೋಡಣೆಯಾಗಿ 1 ಲಕ್ಷ 48 ಸಾವಿರ ಕ್ಯೂಸೆಕ್ಸ್  ನೀರು ಕೃಷ್ಣ ನದಿಗೆ ಬಂದಿದೆ. 

ಸದ್ಯಕ್ಕೆ ಹಿಪ್ಪರಗಿ ಬ್ಯಾರೇಜ್ ಹತ್ತಿರ 1 ಲಕ್ಷ 12 ಸಾವಿರ ನೀರು ಹರಿದು ಆಲಮಟ್ಟಿ ಜಲಾಶಯ ಸೇರಲಿದ್ದು ಈಗಾಗಲೇ ಮುಖ್ಯ ಇಂಜಿನಿಯರ್ ಗೆ  ಮಾಹಿತಿ ನೀಡಲಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚು ಸಂಗ್ರಹಣೆಯಾದ ನೀರನ್ನು ಈಗಾಗಲೇ ಬಿಡಗುಡೆ ಮಾಡಲಾಗುತ್ತಿದೆ.  

Home add -Advt

ಹಿಡಕಲ್ ಜಲಾಶಯದಿಂದ 36 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. ರೈತರಿಗೆ ತೊಂದರೆಯಾಗಿದಂತೆ ಹಂತ ಹಂತವಾಗಿ ಮುನ್ನೆಚ್ಚರಿಕೆ ವಹಿಸಿಕೊಂಡು ನೀರು ಬಿಡುಗಡೆ ಸೂಚಿಸಲಾಗಿದೆ.  

ಮುಳುಗಡೆಯಾಗಿರುವ ಲೋಳಸೂರು ಸೇತುವೆ ಮೇಲೆ ಜನರು ಸಂಚರಿಸಿದಂತೆ ಬ್ಯಾರಿಕೇಡ್ ಹಾಕಿ ತಹಶೀಲ್ದಾರ್ ಅವರಿಂದ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಸಹ ಮುಂಜಾಗೃತಿಯಿಂದ 2 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ.

ನದಿ ಬದಿಯಲ್ಲಿರುವ ರೈತರು ಎಚ್ಚರಿಕೆಯಿಂದ ಇರಬೇಕು. ಗೋಕಾಕ್ ನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆ ಬಿದ್ದು 57 ವರ್ಷದ ಮಹಿಳೆ ಮೃತರಾಗಿದ್ದು, ಸ್ಥಳೀಯ ಶಾಸಕರ ಗಮನಕ್ಕೆ ತಂದು ಜಿಲ್ಲಾಡಳಿತದಿಂದ ತಕ್ಷಣವೇ ಪರಿಹಾರ ಬಿಡುಗಡೆ ತಿಳಿಸಲಾಗಿದೆ.
ಮೃತ ಮಹಿಳೆಯ ಸಂಬಂಧಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಪತ್ತು ನಿರ್ವಹಣಾ ಪಾಧಿಕಾರದ ವತಿಯಿಂದ ಪರಿಹಾರ ಕೂಡ ನೀಡಲಾಗುತ್ತಿದೆ ತಿಳಿಸಿದರು.
ಜಿಲ್ಲೆಯಲ್ಲಿ ಎಸ್.ಡಿ.ಆರ್.ಎಫ್- ಎನ್.ಡಿ.ಆರ್.ಎಫ್ ತಂಡಗಳನ್ನು ಸಿದ್ದ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಲೋಳಸುರ ಸೇತುವೆ ಮುಳುಗಡೆಯ ನೀರಿನ ಪ್ರಮಾಣದಿಂದ ಗೋಕಾಕ್ ನಲ್ಲಿ ಸರಿಸುಮಾರು 200 ಮನೆಗಳಿಗೆ ತೊಂದರೆಯಾಗಿದೆ.
ಪರಿಹಾರ ಕೇಂದ್ರಕ್ಕೆ ಬರುವವರನ್ನು ಸ್ಥಳಾಂತರಿಸಿ, ನಿಯೋಜಿತ ಅಧಿಕಾರಿಗಳು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಕೃಷ್ಣ ನದಿ 1.5 ಲಕ್ಷ ಕ್ಯೂಸೆಕ್ಸ್ ನೀರು ಪ್ರಮಾಣ ದಾಟಿದ ನಂತರ ಪ್ರವಾಹ ಎದುರಾಗುವ ಸಂಭವವಿದೆ. ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ ವ್ಯಾಪ್ತಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು
ಒಟ್ಟು ಜಿಲ್ಲೆಯಲ್ಲಿ 550 ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಗಿದೆ.  ಅದರಲ್ಲಿ 63 ಕೇಂದ್ರಗಳ ಅವಶ್ಯಕತೆ ಬರಬಹುದು ಆದರೆ ಈಗ ಸದ್ಯಕ್ಕೆ ಗೋಕಾಕ ಮತ್ತು ನಿಪ್ಪಣಿಯಲ್ಲಿ ಮಾತ್ರ 2 ಕಾಳಜಿ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕುಡಿಯುವ ನೀರು, ಆಹಾರ, ವಸತಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಿರುವ ಕುರಿತು ಪರಿಶೀಲಿಸಿ, ಶಾಶ್ವತ ಮನೆ ಇಲ್ಲದ ನೆರೆಯ ಸಂತ್ರಸ್ತರಿಗೆ ಮನೆ ಮಂಜೂರು ಮಾಡಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ತಹಶೀಲ್ದಾರ್ ಮೋಹನ್ ಭಸ್ಮೆ, ನ್ಯೂಡಲ್ ಅಧಿಕಾರಿ ಬಸವರಾಜ ಕುರಿಹುಲಿ, ತಾಲೂಕಾ ಆರೋಗ್ಯಾಧಿಕಾರಿ ಮುತ್ತಣ್ಣ ಕೊಪ್ಪದ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Related Articles

Back to top button