*ಮೂಡಲಗಿ: ಪ್ರಜಾ ಸೌಧ ಆಡಳಿತ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆ: ಶಾಸಕ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಮೂಡಲಗಿ : ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ ಪ್ರಜಾ ಸೌಧ ಆಡಳಿತ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಈ ಬಗ್ಗೆ ಗುರುವಾರದಂದು ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದವರು ತಿಳಿಸಿದ್ದಾರೆ.
ಮೂಡಲಗಿ ಪಟ್ಟಣದ ಈಗಿರುವ ತಹಶೀಲ್ದಾರ ಕಛೇರಿಯ ಮುಂಭಾಗದಲ್ಲಿ ಸುಮಾರು 2 ಎಕರೆ ನಿವೇಶನದಲ್ಲಿ ಪ್ರಜಾಸೌಧ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಕಟ್ಟಡ ಕಾಮಗಾರಿಯಿಂದ ಒಂದೇ ಕಟ್ಟಡದಲ್ಲಿ ಸರ್ಕಾರದ ಎಲ್ಲ ಕಛೇರಿಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಸಾರ್ವಜನಿಕರಿಗೆ ವಿವಿಧ ಕಛೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಸಾರ್ವಜನಿಕರ ಬಹು ದಿನಗಳ ಪ್ರಮುಖ ಬೇಡಿಕೆಯಾಗಿದ್ದ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.