Kannada NewsKarnataka NewsLatest

*ಧರ್ಮಕ್ಕೆ ನಾಶ ಇಲ್ಲ ಧರ್ಮ ನಾಶ ಮಾಡಿದವರಿಗೆ ಉಳಿಗಾಲವಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು*

ಪ್ರಗತಿವಾಹಿನಿ ಸುದ್ದಿ: ವೀರಶೈವ ಧರ್ಮ ವಿಶಾಲ ಮನೋಭಾವದ ಧರ್ಮವಾಗಿದ್ದು, ಇದರ ಸಮಗ್ರತೆಗೆ, ಮಾನವಕುಲದ ಹಿತಕ್ಕೆ ಶ್ರಮಿಸಿದ ಶ್ರೇಯಸ್ಸು ಪಂಚಪೀಠದ ಪೂರ್ವಾಚಾರ್ಯರಿಗೆ, ಸಮಾಜಕ್ಕೆ ಮಾರ್ಗದರ್ಶದ ಮಾಡಿದ ಶರಣ ಸಂತ ಮಹಂತರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಿನ ಸುಳ್ಳ  ಪಂಚಗೃಹ ಹಿರೇಮಠದಲ್ಲಿ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಮಂಗಲ ಕಾರ್ಯಕ್ರಮ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ವೀರಶೈವ ಧರ್ಮ ಈ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಜ್ಞಾನದೊಂದಿಗೆ ಕಾಯಕದ ಪರಿಕಲ್ಪನೆಯನ್ನು ಕೊಟ್ಟಿದೆ. ವೀರಶೈವ ಧರ್ಮದ ಬೋಧನೆಗಳನ್ನು ಪಾಲಿಸಿದರೆ ಮಾನವ ಸಮಾಜಕ್ಕೆ ಮಾನ್ಯತೆ, ಉನ್ನತಿ ಮತ್ತು ಶ್ರೇಯಸ್ಸು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಾನತೆ, ಸಾಮರಸ್ಯ, ಹೃದಯ ವೈಶಾಲ್ಯತೆ ಬೆಳೆಸುವ ನಿಟ್ಟಿನಲ್ಲಿ ಪ್ರಾಚೀನ ಕಾಲದಿಂದಲೂ ಪಂಚಪೀಠಗಳು ಈ ನಾಡಿಗೆ ಅಪಾರ ಕೊಡುಗೆಯನ್ನು ನೀಡಿವೆ. ಧರ್ಮಕ್ಕೆ ನಾಶ ಎಂಬುದಿಲ್ಲ; ಧರ್ಮವನ್ನು ನಾಶ ಮಾಡಲು ಬಂದವರು ತಾವೇ ಅದಕ್ಕೆ ಒಳಗಾಗುತ್ತಾರೆ.

ಮುಂದೆ ಸಮಾಜದಿಂದ ದೂರ ಹೋಗುತ್ತಾರೆ. ಕೆಲವೇ ಕೆಲವು ವ್ಯಕ್ತಿಗಳು ಸಮಾಜದಲ್ಲಿ ಧರ್ಮ ವಿರೋಧಿ ಭಾವನೆಗಳನ್ನು ಬಿತ್ತಲು, ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಇಂತಹ ಪ್ರಯತ್ನ ಮಾಡಿದವರು ಸಮಾಜದಿಂದ ಹೆಸರು ಹೇಳಲು ಇಲ್ಲದಂತೆ ಹೋಗಿದ್ದಾರೆ. ಧರ್ಮ ಎಂಬುದು ಶಾಶ್ವತ. ನಂಬಿ ನಡೆದರೆ ಧರ್ಮ ಎಲ್ಲರನ್ನು ರಕ್ಷಿಸುತ್ತದೆ. ಎಲ್ಲರೂ ಸನಾತನ ವೀರಶೈವ ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪಾಲಿಸಬೇಕು. ಧರ್ಮ ಸಹಿಷ್ಣುತೆ ಬೆಳೆಸಿಕೊಂಡು, ಎಲ್ಲೆಡೆ ಸಹೋದರತ್ವದಿಂದ ಬಾಳುವಂತಾಗಬೇಕು. ರಾಜ್ಯ ಸರಕಾರ ಬರುವ ದಿನಗಳಲ್ಲಿ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಮಾಡಲಿದ್ದು. ಎಲ್ಲ ವೀರಶೈವ ಲಿಂಗಾಯತರು ಧರ್ಮದ ಕಾಲಂದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಜಾತಿ ಕಾಲಂದಲ್ಲಿ ತಮ್ಮ ಒಳಪಂಗಡಗಳನ್ನು ನಮೂದಿಸಬಹುದು ಎಂದರು.

ಸಮಾರಂಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. 

ಹೂಲಿ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯರು, ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ನವಲಗುಂದ ಪಂಚಗೃಹ ಹಿರೇಮಠದ ಶ್ರೀಗಳು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯರು, ಗುರುರಾಯನಗೌಡ್ರ, ಗಿರಿಜಮ್ಮ ಹೂಗಾರ, ದೇಮಕ್ಕನವರ, ಕಲ್ಲಪ್ಪ ಒಂಟಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸುಳ್ಳ ಹಾಗೂ ಸುತ್ತಲಿನ ಗ್ರಾಮಗಳ ಮುಖಂಡರು, ಶ್ರೀ ಮಠದ ಭಕ್ತರು ಭಾಗವಹಿಸಿದ್ದರು.

Home add -Advt

ಧರ್ಮಸಭೆ ಸಮಾರಂಭ ಪೂರ್ವದಲ್ಲಿ ರಂಭಾಪುರಿ ಜಗದ್ಗುರುಗಳು ವೀರಭದ್ರೇಶ್ವರ ದೇವಸ್ಥಾನದ ನೂತನ ಕಳಸಾರೋಹಣ ನೇರವೇರಿಸಿದರು.

Related Articles

Back to top button